ಬೆಂಗಳೂರು: ಬೆಂಗಳೂರು ಮಳೆ ಹಾನಿಗೆ ತಪ್ಪಿನ ಹೆಚ್ಚಿನ ಭಾಗ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಆರೋಪಿಸಿದರು. ವಿಧಾನಸಭೆಯಲ್ಲಿ ಅತಿವೃಷ್ಠಿ ಮೇಲಿನ ಚರ್ಚೆ ವೇಳೆ ಮಾತನಾಡುತ್ತಾ, 2006 ರಿಂದ 2023 ವರೆಗೆ ಆರು ವರ್ಷ ಬಿಟ್ಟು ಉಳಿದ ಅವಧಿಯಲ್ಲಿ ಬಿಜೆಪಿಗರು ಆಡಳಿತ ನಡೆಸಿದೆ.
ಈ ಹಿನ್ನೆಲೆಯಲ್ಲಿ ಏನೇ ತಪ್ಪು ಆದರೂ ಹೆಚ್ಚಿನ ಭಾಗ ಬಿಜೆಪಿಗೆ ಸಲ್ಲುತ್ತದೆ ನಮಗೆ ಸಲ್ಲಲ್ಲ. ನಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಸುಮ್ಮನೆ ಕಾಂಗ್ರೆಸ್ನ್ನು ದೂರಬೇಡಿ. ಐಟಿ ಬಿಟಿ ಒತ್ತುವರಿ ಮಾಡಿದ್ದರೆ ಅದರ ಮೇಲೆ ಕ್ರಮ ಕೈಗೊಳ್ಳಿ. ಆದರೇ, ಐಟಿ ಬಿಟಿಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ. ಮೂಲಸೌಕರ್ಯ ಕೇಳುತ್ತಾರೆ ಅದನ್ನು ಕೊಡಬೇಕು. ಅವರ ಮೇಲೆ ಮುಗಿ ಬೀಳುವುದು ಸರಿಯಲ್ಲ ಎಂದರು.
ಇವತ್ತು ಬೆಂಗಳೂರಿನಲ್ಲಿ ಎಲ್ಲಾ ರಸ್ತೆಗಳು ಹಾಳಾಗಿವೆ. ರಸ್ತೆಗುಂಡಿಯಿಂದ ಒಂದೂವರೆ ವರ್ಷದಿಂದ 15 ಜನ ಸತ್ತಿದ್ದಾರೆ. ಪ್ರಮುಖ ರಸ್ತೆಗಳಿಗೆ ಆದ್ಯತೆ ಕೊಡಿ, ಪ್ರತ್ಯೇಕ ಅನುದಾನ ಕೊಡಿ. ಈ ಹಿಂದೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ರಸ್ತೆ ಅಭಿವೃದ್ದಿಗ್ಗಾಗಿ 12 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ಆದರೇ, ಬಿಜೆಪಿ ಸರ್ಕಾರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಕೇವಲ 1,365 ಕೋಟಿ ಅನುದಾನ ಮಾತ್ರ ಕೊಟ್ಟಿದೆ. ಇನ್ನು ಬೆಂಗಳೂರು ಅಭಿವೃದ್ಧಿ ಒಂದಕ್ಕೆ ಬಿಜೆಪಿ ಶಾಸಕರಿಗೆ 9 ಸಾವಿರ ಕೋಟಿ ಅನುದಾನ ಕೊಟ್ಟಿದ್ದೀರಿ. ಹೀಗೆ ಕೊಟ್ಟರೆ ಬೆಂಗಳೂರು ಅಭಿವೃದ್ಧಿ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದರು.
ಶೇ 45ರಷ್ಟು ವ್ಯಾಪ್ತಿ ಇರುವ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಇಷ್ಟು ಕಡಿಮೆ ಅನುದಾನ ಕೊಟ್ರೆ ಬೆಂಗಳೂರು ಅಭಿವೃದ್ಧಿ ಹೇಗೆ ಆಗುತ್ತೆ? ಗುಂಡಿಗಳು ಕಾಂಗ್ರೆಸ್ ಕ್ಷೇತ್ರದಲ್ಲಿ ಬೀಳಬೇಕು, ಬಿಜೆಪಿ ಕ್ಷೇತ್ರದಲ್ಲಿ ಬೀಳಬಾರದು ಎಂದು ಏನಾದರೂ ಇರುತ್ತಾ.? ಅನುದಾನ ಕೊಡುವ ಸಂದರ್ಭದಲ್ಲಿ ಆಡಳಿತ ಪಕ್ಷಗಳು ಹೆಚ್ಚು ತೆಗೆದುಕೊಳ್ಳಲಿ ಬೇಡಾ ಅನ್ನಲ್ಲ, ಆದರೆ ವಿರೋಧ ಪಕ್ಷದವರಿಗೆ ಅತೀ ಕಡಿಮೆ ಕೊಟ್ಟರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಗುತ್ತಿಗೆದಾರರು ನಿಮ್ಮ ಸರ್ಕಾರದ ಮಾನ ಮರ್ಯಾದೆ ತೆಗೆಯುತ್ತಿದ್ದಾರೆ: ಜಿಟಿ ದೇವೇಗೌಡ