ಬೆಂಗಳೂರು: ಕಾಂಗ್ರೆಸ್ ಅಧಿಕಾರವಧಿಯಲ್ಲಿ ಪಿಎಫ್ಐ ಮೇಲಿನ ಒಂದೂ ಪ್ರಕರಣವನ್ನು ಹಿಂಪಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪಿಎಫ್ಐ ಬೆಳೆಯಲು ಸಿದ್ದರಾಮಯ್ಯ ಸರ್ಕಾರ ಕಾರಣ ಎಂದು ಬಿಜೆಪಿಯವರು ತಲೆಬುಡ ಇಲ್ಲದ ಆರೋಪ ಮಾಡುತ್ತಿದ್ದಾರೆ. ಸಿಎಂ ಆದಿಯಾಗಿ ಬಿಜೆಪಿ ಮುಖಂಡರು ಕಾಂಗ್ರೆಸ್ ಪಿಎಫ್ಐ ಬೆಳೆಸಿದೆ ಎಂದು ಮಾಧ್ಯಮಗಳ ಮುಂದೆ ಉತ್ತರ ಕುಮಾರರಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
2013ರಿಂದ 2022 ಜನವರಿ ವರೆಗೆ ಪ್ರಕರಣಗಳನ್ನು ಹಿಂಪಡೆದಿರುವ ಬಗ್ಗೆ ಆರ್ಟಿಐ ಮಾಹಿತಿ ತೆಗೆದುಕೊಂಡಿದ್ದೇನೆ. ಇವರ ಸರ್ಕಾರವೇ ಈ ಸಂಬಂಧ ಆರ್ಟಿಐ ದಾಖಲಾತಿ ನೀಡಿದೆ. ಆರ್ಟಿಐನಲ್ಲಿ ಗೃಹ ಇಲಾಖೆಯಿಂದಲೇ ಮಾಹಿತಿ ಪಡೆದಿದ್ದೇವೆ. ನಾವು ವಾಪಾಸ್ ಪಡೆದ ಕೇಸುಗಳ ಮಾಹಿತಿ ಪಡೆದಿದ್ದೇವೆ. ಎಲ್ಲೂ ಪಿಎಫ್ಐ ಪ್ರಕರಣ ವಾಪಾಸ್ ಪಡೆಸಿದ್ದೇವೆ ಎಂಬುದರ ಒಂದು ದಾಖಲೆಯೂ ಇಲ್ಲ. ನಾವು ನಮ್ಮ ಅಧಿಕಾರಾವಧಿಯಲ್ಲಿ ಪಿಎಫ್ಐ ಮೇಲಿನ ಯಾವುದೇ ಪ್ರಕರಣಗಳನ್ನು ಹಿಂಪಡೆದಿಲ್ಲ. ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ 294 ರೈತರು, ಸಾರ್ವಜನಿಕರ ಮೇಲಿನ ವಿವಿಧ ಪ್ರಕರಣಗಳನ್ನು ವಾಪಸು ಪಡೆದಿದ್ದೇವೆ ಎಂದು ತಿಳಿಸಿದರು.
ಅದೇ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ 367 ಕೇಸು ವಾಪಾಸ್ ಪಡೆದಿದ್ದಾರೆ. ಅದರಲ್ಲಿ ಕೋಮು ಗಲಭೆ ಸೇರಿದಂತೆ 44 ಸಂಘ ಪರಿವಾರ ಪರವಾದ ಕೇಸು ವಾಪಾಸ್ ಪಡೆದಿದ್ದಾರೆ. ಟಿಪ್ಪು ಗಲಾಟೆಗೆ ಸಂಬಂಧಿಸಿದಂತೆ 21 ಕೇಸುಗಳನ್ನ ವಾಪಾಸು ಪಡೆದಿದ್ದಾರೆ. ನಾವು ಯಾವುದೇ ಪಿಎಫ್ಐ ಕಾರ್ಯಕರ್ತರ ಕೇಸ್ ವಾಪಸ್ ಪಡೆದಿಲ್ಲ. ಬಿಜೆಪಿಯವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಬಿಜೆಪಿಯವರು ಏನೇ ಇದ್ದರು ದಾಖಲೆ ಮುಂದೆ ಇಟ್ಟು ಮಾತನಾಡಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರಿಗೆ ಸುಳ್ಳು ಹೇಳುವುದು ರಕ್ತಗತವಾಗಿ ಬಂದಿದೆ. ಅವರಿಗೆ ಸುಳ್ಳು ಹೇಳಿಲ್ಲವಾದರೆ ತಿಂದ ಅನ್ನ ಜೀರ್ಣ ಆಗಲ್ಲ. ಏನೇ ಇದ್ದರೂ ದಾಖಲೆ ಇಟ್ಟು ಮಾತನಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಇಂದು ಜೆಡಿಎಸ್ ಜನತಾ ಮಿತ್ರ ಸಮಾರೋಪ ಸಮಾವೇಶ: ಸಮಾವೇಶ ಸ್ಥಳ ಪರಿಶೀಲಿಸಿದ ಕುಮಾರಸ್ವಾಮಿ