ಬೆಂಗಳೂರು: ವಿಧಾನಸಭೆಯಲ್ಲಿಂದು ಆರು ಖಾಸಗಿ ವಿಶ್ವವಿದ್ಯಾಲಯ ವಿಧೇಯಕಗಳು ಅಂಗೀಕಾರಗೊಂಡವು. ಕಲಾಪದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಈ ವಿಧೇಯಕಗಳನ್ನು ಪರ್ಯಾಲೋಚಿಸಿ ಅಂಗೀಕಾರ ಪಡೆದರು.
2022ನೇ ಸಾಲಿನ ಜಿ.ಎಂ.ವಿಶ್ವವಿದ್ಯಾಲಯ ವಿಧೇಯಕ, 2022ನೇ ಸಾಲಿನ ಕಿಷ್ಕಿಂದ ವಿಶ್ವವಿದ್ಯಾಲಯ ವಿಧೇಯಕ, 2022ನೇ ಸಾಲಿನ ಆಚಾರ್ಯ ವಿಶ್ವವಿದ್ಯಾಲಯ ವಿಧೇಯಕ, 2022ನೇ ಸಾಲಿನ ಸಪ್ತಗಿರಿ ಎನ್ ಪಿ ಎಸ್ ವಿಶ್ವವಿದ್ಯಾಲಯ ವಿಧೇಯಕ, 2022ನೇ ಸಾಲಿನ ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ ವಿಧೇಯಕ, 2022ನೇ ಸಾಲಿನ ಟಿ. ಜಾನ್ ವಿಶ್ವವಿದ್ಯಾಲಯ ವಿಧೇಯಕಗಳಿಗೆ ಒಪ್ಪಿಗೆ ದೊರೆತಿದೆ.
ಕಳೆದ ಬೆಳಗಾವಿ ಅಧಿವೇಶನದಲ್ಲಿ ಖಾಸಗಿ ವಿವಿ ವಿಧೇಯಕಗಳ ಮಂಡನೆಗೆ ಉನ್ನತ ಶಿಕ್ಷಣ ಸಚಿವರು ಮುಂದಾಗಿದ್ದರು. ಆದರೆ ಆಡಳಿತ ಪಕ್ಷದ ಕೆಲ ಸದಸ್ಯರು ವಿಧೇಯಕಗಳ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಕೆಲ ತಿದ್ದುಪಡಿ ಮಾಡಿ ಬಜೆಟ್ ಅಧಿವೇಶನದಲ್ಲಿ ಮಂಡನೆ ಮಾಡುವಂತೆ ಸೂಚಿಸಿದ್ದರು.
ಸುದೀರ್ಘ ಚರ್ಚೆಗೆ ಆಗ್ರಹ: ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ವೀರಣ್ಣ ಚರಂತಿಮಠ, ಅರವಿಂದ ಲಿಂಬಾವಳಿ ಸೇರಿದಂತೆ ಕಾಂಗ್ರೆಸ್ ಸದಸ್ಯರ ವಿರೋಧದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಮಂಡನೆಯಾಗಿದ್ದ ಖಾಸಗಿ ವಿಶ್ವ ವಿದ್ಯಾಲಯಗಳ ವಿಧೇಯಕಕ್ಕೆ ಬ್ರೇಕ್ ಬಿದ್ದಿತ್ತು. ವಿಧೇಯಕವನ್ನು ತರಾತುರಿಯಲ್ಲಿ ಅಂಗೀಕಾರ ಮಾಡದೆ ಸುದೀರ್ಘ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಬಜೆಟ್ ಅಧಿವೇಶನದಲ್ಲಿ ಮಂಡನೆ: ಫೆಬ್ರವರಿ 16ರಂದು ನಡೆದ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಗಳನ್ನು ಮಂಡಿಸಲಾಗಿತ್ತು. ಈ ವೇಳೆ ಸದನದಲ್ಲಿ ಸದಸ್ಯ ಬಲ ಕೇವಲ 13 ಇದ್ದಿದ್ದರಿಂದ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದಸ್ಯ ಬಲ ಇಲ್ಲದಿರುವುದರಿಂದ ಮಸೂದೆ ಅಂಗೀಕರಿಸುವುದು ಸರಿಯಲ್ಲ ಎಂದು ಹೇಳಿ ಚರ್ಚೆಯನ್ನು ಮುಂದೂಡಿದ್ದರು. ಆದರೆ ಇಂದು ಸುಮಾರು 30ಕ್ಕೂ ಹೆಚ್ಚು ಸದಸ್ಯರು ಇದ್ದ ವೇಳೆ ಮಸೂದೆಗಳನ್ನು ಧ್ವನಿಮತಕ್ಕೆ ಹಾಕಿ ಅಂಗೀಕಾರ ಪಡೆಯಲಾಯಿತು.
ವಿವಿಗೆ ಸ್ವಾಯತ್ತತೆ: ಶಿಕ್ಷಣದಲ್ಲಿ ಸಾಕಷ್ಟು ಸಂಸ್ಥೆಗಳಿಗೆ ಸ್ವಾಯತ್ತತೆ ಕೊಡುವ ನಿಟ್ಟಿನಲ್ಲಿ ಈ ವಿಧೇಯಕ ತರಲಾಗಿದೆ. ಖಾಸಗಿ ವಿವಿಗಳಿಗೆ ಸಂಯೋಜನೆ ಕೊಡುವ ಅಧಿಕಾರ ಇಲ್ಲ. ಸರ್ಕಾರ ಹಣಕಾಸು ಸಹಾಯ ಮಾಡುವುದಿಲ್ಲ. 40% ಸೀಟು ಸರ್ಕಾರದ ವ್ಯಾಪ್ತಿಯಲ್ಲಿ ದಾಖಲಾತಿ ಮಾಡಲಾಗುತ್ತದೆ. ಉಳಿದ 60% ಸೀಟು ಫೀಸ್ ರೆಗ್ಯೂಲೇಟಿಂಗ್ ಸಮಿತಿ ಪ್ರಕಾರ ನಿಗದಿ ಮಾಡಿ ಅಡ್ಮೀಶನ್ ಮಾಡಲು ಅವಕಾಶ ಇದೆ ಎಂದು ಉನ್ನತ ಶಿಕ್ಷಣ ಸಚಿವರು ವಿಧಾನಸಭೆ ವಿವರಿಸಿದರು.