ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬೆಳಗಾವಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ಹಾಗೂ ಬಳ್ಳಾರಿ ವಿಭಾಗ ಪ್ರಭಾರಿ ಅಶೋಕ್ ಗಸ್ತಿ ಅವರನ್ನು ಅಭ್ಯರ್ಥಿಗಳನ್ನಾಗಿ ಬಿಜೆಪಿ ಹೈಕಮಾಂಡ್ ಘೋಷಿಸಿದೆ. ಇಬ್ಬರು ಮುಖಂಡರು ನಾಮಪತ್ರ ಸಲ್ಲಿಕೆಗೆ ಬೇಕಾದ ದಾಖಲೆಗಳೊಂದಿಗೆ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದಾರೆ.
ನಾಳೆ ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ನಾಯಕರ ಜೊತೆ ಅಭ್ಯರ್ಥಿಗಳು ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ. ಪಕ್ಷದ ನಾಯಕರು ನಾಮಪತ್ರಗಳ ದಾಖಲೆಗಳನ್ನು ಪರಿಶೀಲಿಸಿ ಸೂಚಕರ ಸಹಿ ಹಾಕಿಸಲಾಗುತ್ತದೆ. ಇಬ್ಬರು ಅಭ್ಯರ್ಥಿಗಳು ಎರಡು ಪ್ರತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.