ಬೆಂಗಳೂರು: ಬಹುನಿರೀಕ್ಷೆಯ ರಾಜ್ಯಸಭೆ ಚುನಾವಣೆ ಶುಕ್ರವಾರ ಬೆಳಗ್ಗೆ 9ಕ್ಕೆ ಆರಂಭವಾಗಿದೆ. ರಾಜ್ಯದಿಂದ ನಾಲ್ಕು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿ ಇದ್ದಾರೆ. ಹೀಗಾಗಿ ಮತ ಲೆಕ್ಕಾಚಾರ ಕುತೂಹಲ ಕೆರಳಿಸಿದೆ. ನಮ್ಮ ರಾಜ್ಯದ ಮತ ಲೆಕ್ಕಾಚಾರ ಗಮನಿಸಿದಾಗ ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ಗಳಿಗೆ ಈಗಿರುವ ಸಂಖ್ಯಾಬಲ ಹಾಗೂ ಅಭ್ಯರ್ಥಿಗಳಿಗೆ ಮಾಡಲಾಗುವ ಮತ ಹಂಚಿಕೆ ಆಧಾರದಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್‌ನ ಜೈರಾಮ್ ರಮೇಶ್ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಮೊದಲ ಸುತ್ತಿನಲ್ಲೇ ಅನಾಯಾಸವಾಗಿ ಗೆಲುವು ಸಾಧಿಸುತ್ತಾರೆ.
ಏನಿದು ಲೆಕ್ಕಾಚಾರ: ಉಳಿದಿರುವ ಒಂದು ಸ್ಥಾನಕ್ಕೆ ಮೂರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಜೆಡಿಎಸ್ ಬಳಿ ಅತಿ ಹೆಚ್ಚು ಅಂದರೆ 32 ಮೊದಲ ಪ್ರಾಶಸ್ತ್ಯದ ಮತಗಳು ಉಳಿಯುತ್ತವೆ. ಉಳಿದಂತೆ ಬಿಜೆಪಿ ಬಳಿ 32 ಹೆಚ್ಚುವರಿ ಮತಗಳು, 90 ಎರಡನೇ ಪ್ರಾಶಸ್ತ್ಯದ ಮತಗಳು ಇರುತ್ತವೆ. ಕಾಂಗ್ರೆಸ್ ಬಳಿ 25 ಹೆಚ್ಚುವರಿ ಮತಗಳು, 45 ಎರಡನೇ ಪ್ರಾಶಸ್ತ್ಯದ ಮತಗಳು ಉಳಿಯುತ್ತವೆ. ಜೆಡಿಎಸ್ ಬಳಿ ಎರಡನೇ ಪ್ರಾಶಸ್ತ್ಯದ ಮತಗಳಿಗೆ ಅವಕಾಶವಿಲ್ಲ.
ಮೊದಲ ಸುತ್ತಿನಲ್ಲಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದ ಅಭ್ಯರ್ಥಿಗಳನ್ನು ಚುನಾಯಿತ ಎಂದು ಘೋಷಿಸಿದ ಬಳಿಕ ಮತ್ತು ಮೊದಲ ಸುತ್ತಿನಲ್ಲಿ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಕಣದಿಂದ ಕೈಬಿಡುವ ಪ್ರಕ್ರಿಯೆ ನಂತರ 2ನೇ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಕಣದಿಂದ ಕೈಬಿಡಲಾದ ಅಭ್ಯರ್ಥಿಗಳಿಗೆ ಬಿದ್ದಿರುವ ಮತಗಳು ಆತನಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದ ಅಭ್ಯರ್ಥಿಗೆ ವರ್ಗಾಯಿಸಲಾಗುತ್ತದೆ.
ಈ ರೀತಿ ಎರಡನೇ ಪ್ರಾಶಸ್ತ್ಯದ ಮತಗಳ ಪ್ರಕ್ರಿಯೆ ನಡೆದು ನಾಲ್ಕನೇ ಅಭ್ಯರ್ಥಿಯ ಭವಿಷ್ಯ ನಿರ್ಧಾರವಾಗಲಿದೆ. ಅಡ್ಡ ಮತದಾನ ನಡೆದರೆ, ಶಾಸಕರು ಮತದಾನಕ್ಕೆ ಗೈರು ಹಾಜರಾದರೆ, ಮತಗಳು ಕುಲಗೆಟ್ಟರೆ ಲೆಕ್ಕಾಚಾರದಲ್ಲಿ ಏರುಪೇರು ಆಗುವ ಸಾಧ್ಯತೆಗಳಿರುತ್ತವೆ.
ಓದಿ: ರಾಜ್ಯಸಭೆ ಚುನಾವಣೆ: ಇಂದೇ ಮತದಾನ, ಇಂದೇ ಫಲಿತಾಂಶ.. 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ
ಪಕ್ಷಗಳ ಸಂಖ್ಯಾಬಲ:
- ಬಿಜೆಪಿ-122 (ಸ್ಪೀಕರ್ - ಇಬ್ಬರು ಪಕ್ಷೇತರರು ಸೇರಿ)
- ಕಾಂಗ್ರೆಸ್-70 (ಒಬ್ಬರು ಪಕ್ಷೇತರ)
- ಜೆಡಿಎಸ್-32 ನಾಮ ನಿರ್ದೇಶಿತ ಸದಸ್ಯರು ಒಬ್ಬರು (ಮತದಾನದ ಹಕ್ಕು ಇಲ್ಲ)
ಮತ ನಿಗದಿಗೆ ಅನುಸರಿಸುವ ಸೂತ್ರ:
- ಒಟ್ಟು ಅರ್ಹ ಮತಗಳು 100 (ಒಂದು ಮತದ ಮೌಲ್ಯ) ಪ್ಲಸ್ 1
- ಸ್ಥಾನಗಳ ಸಂಖ್ಯೆ ಪ್ಲಸ್ 1
- 224 ಒಟ್ಟು ಸ್ಥಾನ 100 ಪ್ಲಸ್ 1
- 4 ಪ್ಲಸ್ 1
- 22, 401 = 4,481 ಅಥವಾ 44.81 ಇದಕ್ಕೆ 5 ಎಂದು ಅಂತಿಮಗೊಳಿಸಲಾಗುತ್ತದೆ.
ಒಟ್ಟಾರೆ 45 ಮತಗಳನ್ನು ನಿಗದಿಪಡಿಸಲಾಗುತ್ತದೆ. ಅಂದರೆ ಒಂದು ಮತದ ಮೌಲ್ಯ 4,500 ಆಗುತ್ತದೆ.
ಇದುವರೆಗಿನ ಮತದಾನ: ಬಿಜೆಪಿ 60, ಕಾಂಗ್ರೆಸ್ 17 ಹಾಗೂ ಜೆಡಿಎಸ್ 6 ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿ ಮೊದಲ ಅಭ್ಯರ್ಥಿ ನಿರ್ಮಲ ಸೀತಾರಾಮನ್ ಗೆಲುವು ಈ ಮೂಲಕ ಖಚಿತವಾಗಿದ್ದು, ಸದ್ಯ ಬರುವ ಬಿಜೆಪಿ ಸದಸ್ಯರು ಜಗ್ಗೇಶ್ಗೆ ಮತ ನೀಡುತ್ತಿದ್ದಾರೆ.