ಬೆಂಗಳೂರು: ಕರಾವಳಿ ಪ್ರದೇಶದ ಜಿಲ್ಲೆಗಳು ಹಾಗೂ ಪಶ್ಚಿಮ ಘಟ್ಟದ ಸುತ್ತಲಿನ ಜಿಲ್ಲೆಗಳಿಗೆ ವಾರಾಂತ್ಯದವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಮುಂದಿನ ಎರಡು ದಿನ ಗುಡುಗು ಸಿಡಿಲಿನ ಅಲರ್ಟ್ ನೀಡಿದೆ. ಈ ಕುರಿತು ಹವಾಮಾನ ಕೇಂದ್ರದ ತಜ್ಞ ಸಿಬ್ಬಂದಿ ಸದಾನಂದ ಅಡಿಗ ಅವರು ಮಾಹಿತಿ ನೀಡಿದ್ದಾರೆ. ಕರಾವಳಿಯಲ್ಲಿ ಇಂದು ಹಲವೆಡೆ ಮಳೆಯಾಗಿದ್ದು, ಒಂದೆರಡು ಕಡೆ ಭಾರಿ ಮಳೆಯಾಗಿದೆ. ನಾಳೆ ಹಾಗೂ ನಾಡಿದ್ದು ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದರು.
ಮಾರ್ಚ್ 27 ಹಾಗೂ 28 ರಂದು ಉಡುಪಿ ಹಾಗೂ ದಕ್ಷಿಣ ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಇಂದು ಎಲ್ಲ ಕಡೆ ಮಳೆಯಾಗಿದ್ದು, ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಒಂದೆರಡು ಕಡೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. 27, 28 ರಂದು ಪಶ್ಚಿಮ ಘಟ್ಟ ಹಾಗೂ ಚಿತ್ರದುರ್ಗದಲ್ಲಿ ಒಂದೆರಡು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣ: ಸಿಲಿಕಾನ್ ಸಿಟಿಯಲ್ಲಿ 33.6 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ನಾಳೆ ಮಳೆಯ ಸಾಧ್ಯತೆ ಇಲ್ಲ. ಮೋಡ ಕವಿದ ವಾತಾವರಣ ಇರುವ ಸಾಧ್ಯತೆ ಇದೆ. ಮಧ್ಯ ಮಹಾರಾಷ್ಟ್ರದ ಕೇಂದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ಆಗ್ನೇಯ ಅರಬ್ಬಿ ಸಮುದ್ರದಲ್ಲಿಯೂ ಮೇಲ್ಮೈ ಸುಳಿಗಾಳಿ ಇದೆ. ಈವರೆಗೆ ಇದ್ದ ವಾಯುಭಾರ ಕುಸಿತ ಮಯನ್ಮಾರ್ ಪ್ರದೇಶದತ್ತ ದುರ್ಬಲಗೊಂಡಿದೆ ಎಂದರು.
ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ: ಕಳೆದ 24 ಗಂಟೆ ಅವಧಿಯಲ್ಲಿ ಕರಾವಳಿಯಲ್ಲಿ ಹಲವೆಡೆ ಮಳೆಯಾಗಿರುವ ವರದಿಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಳೆ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇದ್ದು, ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 41.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ಉಷ್ಣಾಂಶ ಧಾರವಾಡದಲ್ಲಿ 20 ಡಿಗ್ರಿ ಸೆಲ್ಸಿಯಸ್ ಆಗಿದೆ ಎಂದು ತಿಳಿಸಿದ್ದಾರೆ.
ಓದಿ: ಯುನಿಫಾರ್ಮ್ ಬಣ್ಣದ ದುಪ್ಪಟ್ಟಾ ಧರಿಸುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶ ನೀಡಿ: ಸಿದ್ದರಾಮಯ್ಯ