ಬೆಂಗಳೂರು : ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸುವ ಜೊತೆಗೆ ಮಾರಾಟ ಮಾಡಲು ಇತರೆ ವ್ಯಕ್ತಿಗಳೊಂದಿಗೆ ವ್ಯವಹಾರ ಕುದಿರಿಸುತ್ತಿದ್ದರು ಎಂಬ ತನಿಖಾಧಿಕಾರಿಯ ಕೇಸ್ ಡೈರಿಯಲ್ಲಿದ್ದ ಅಂಶಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಮಾದಕ ದ್ರವ್ಯ ಯುವ ಜನತೆಯನ್ನು ಹಾಳು ಮಾಡುತ್ತಿದೆ, ಅದು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರುವುದೇ ಅಲ್ಲದೆ, ಸಮಾಜದ ಭವಿಷ್ಯದ ಮೇಲೂ ಕರಿನೆರಳು ಬೀರಲಿದೆ. ಇಂತಹ ಪ್ರಕರಣಗಳಲ್ಲಿ ಜಾಮೀನು ವಿಚಾರ ಬಂದಾಗ ನ್ಯಾಯಾಲಯಗಳ ತಟಸ್ಥವಾಗಿ ಕುಳಿತುಕೊಳ್ಳಬಾರದು ಎಂದು ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಕೇಸ್ ಡೈರಿಯಲ್ಲಿದ್ದಿದ್ದೇನು:
ಕೇಸ್ ಡೈರಿಯಲ್ಲಿ ತನಿಖಾಧಿಕಾರಿ ಉಲ್ಲೇಖಿಸಿದ್ದ ಅಂಶಗಳನ್ನು ತೀರ್ಪಿನಲ್ಲೂ ಪ್ರಸ್ತಾಪಿಸಿದೆ, ರಾಗಿಣಿ ತನ್ನ ಹುಟ್ಟುಹಬ್ಬದ ದಿನ ಪಾರ್ಟಿಯಲ್ಲಿ ಗೆಳೆಯ ರವಿಶಂಕರ್ ಜೊತೆ ಕೊಕೇನ್ ಸೇವಿಸಿದ್ದಲ್ಲದೆ, ವ್ಯಕ್ತಿಯೊಬ್ಬನಿಗೆ ಗ್ರಾಮ್ಗೆ ಐದು ಸಾವಿರ ರೂ.ನಂತೆ ಮಾರಾಟದ ಆಫರ್ ನೀಡಿದ್ದರು. ಅಂತೆಯೇ ಸಂಜನಾ ಕೂಡ ಡ್ರಗ್ಸ್ ನೀಡುವುದಾಗಿ ಮೊತ್ತಬ್ಬ ಸಾಕ್ಷಿಯಿಂದ 3 ಲಕ್ಷ ರೂ. ಪಡೆದಿದ್ದರು ಎಂಬ ವಿಷಯವನ್ನು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಅಲ್ಲದೆ, ಪ್ರಕರಣದಲ್ಲಿ ತನಿಖಾಧಿಕಾರಿ ಸಲ್ಲಿಸಿರುವ ಕೇಸ್ ಡೈರಿಯಲ್ಲಿ ನಟಿಯರಿಬ್ಬರು ಕೇವಲ ಡ್ರಗ್ಸ್ ಸೇವನೆ ಮಾತ್ರವಲ್ಲ, ಅವರು ಇತರೆ ವ್ಯಕ್ತಿಗಳಿಗೆ ಮಾರಾಟ ಮತ್ತು ಪೂರೈಕೆ ಮಾಡುವ ಡೀಲ್ ಸಹ ಮಾಡುತ್ತಿದ್ದರು. ಡ್ರಗ್ ಪೆಡ್ಲರ್ಗಳ ಜೊತೆ ಅವರು ನೇರ ಸಂಪರ್ಕ ಹೊಂದಿದ್ದರು ಎಂಬುದನ್ನು ರೇಖಾಚಿತ್ರದ ಮೂಲಕ ವಿವರಿಸಲಾಗಿದೆ. ತನಿಖೆಯ ವೇಳೆ ಇಬ್ಬರಿಂದಲೂ ಕೆಲವು ವಿದ್ಯುನ್ಮಾನ ಉಪಕರಣಗಳು ಹಾಗೂ ಅಲ್ಪ ಪ್ರಮಾಣದ ಡ್ರಗ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.