ಬೆಂಗಳೂರು : ನಾನು ಅಧ್ಯಕ್ಷರು ಬಹಳ, ಪ್ರೀತಿ ವಿಶ್ವಾಸದಿಂದಿದ್ದೇವೆ. ಎಲ್ಲರ ಸಹಕಾರದಿಂದ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಯಾವುದೇ ಊಹಾಪೋಹಗಳಿಲ್ಲ. ಅವರ ಉದ್ದೇಶ ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಬೇಕೆಂಬುದಾಗಿದೆ. ಎಲ್ಲ ಕಡೆಯಿಂದ ನಮ್ಮ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮಕ್ಕೆ ಬರಬೇಕು. ಇದನ್ನು ಯಶಸ್ವಿಗೊಳಿಸಬೇಕೆಂದು ಹೇಳಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗಳಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಒಳ್ಳೇ ಉದ್ದೇಶದಿಂದ ಅವರು ಹೇಳಿಕೆ ಕೊಟ್ಟಿರಬಹುದು. ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಬರಬೇಕು. ಆ ನಿಟ್ಟಿನಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಹೆಚ್ ಕೆ ಪಾಟೀಲ್ ಸೇರಿ ಎಲ್ಲರೂ ಒಟ್ಟಾಗಿ ಸೇರಿ ಚುನಾವಣೆಗೆ ಹೋಗಬೇಕು. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅವೆಲ್ಲ ಮರೆತು ಚುನಾವಣೆ ಎದುರಿಸಬೇಕೆಂದು ಹೇಳಿದರು.
ಇನ್ನು, ಟಿಕೆಟ್ ಅಂತಿಮ ಮಾಡುವುದು ಪಕ್ಷದ ಹೈಕಮಾಂಡ್. ಯಾರೋ ಒಬ್ಬರು ಟಿಕೆಟ್ ಕೊಡಲ್ಲ. ಅಧ್ಯಕ್ಷರು, ಸಿಎಲ್‌ಪಿ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತಾರೆ. ಟಿಕೆಟ್ ವಿಚಾರವಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಮಾಜಿ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದರು.
ಇದನ್ನೂ ಓದಿ :ಇಷ್ಟೊತ್ತಿಗೆ ಸಿದ್ದರಾಮಯ್ಯನವರು ಜೈಲಿನಲ್ಲಿರಬೇಕಿತ್ತು.. ಸಚಿವ ಮುನಿರತ್ನ