ಬೆಂಗಳೂರು: ರಾಜ್ಯಾದ್ಯಂತ ಆಸ್ತಿ ನೋಂದಣಿಗಾಗಿ ಜನ ಅಲೆಯುವುದನ್ನು ತಪ್ಪಿಸಲು ಕೇವಲ ಐದೇ ನಿಮಿಷಗಳ ನೋಂದಣಿ ಪದ್ಧತಿಯನ್ನು ನವೆಂಬರ್ 1 ರಿಂದ ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಪ್ರಕಟಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಆಸ್ತಿನೋಂದಣಿಗಾಗಿ ರಾಜ್ಯಾದ್ಯಂತ ಜನರ ಅಲೆದಾಟ ನಡೆಯುತ್ತಲೇ ಇದ್ದು ಇದನ್ನು ತಪ್ಪಿಸಲು ಕಾವೇರಿ-2 ಎಂಬ ಕಾರ್ಯಕ್ರಮ ಜಾರಿಗೊಳಿಸಲಾಗುವುದು. ಇದರಡಿ ಇನ್ನು ಮುಂದೆ ಆಸ್ತಿ ನೋಂದಣಿ ಮಾಡಿಸಲು ಜನ ಉಪನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಡಬೇಕಿಲ್ಲ. ಬದಲಿಗೆ ಮನೆಯಲ್ಲಿ ಕುಳಿತೇ ಆನ್ಲೈನ್ ಮೂಲಕ ಆಸ್ತಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಯ ಜತೆ ದಾಖಲೆ ಸಲ್ಲಿಸಿದರೆ ಉಪನೋಂದಣಾಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ. ಅದರಲ್ಲಿ ಏನಾದರೂ ಕೊರತೆ ಇದ್ದರೆ, ತಪ್ಪಿದ್ದರೆ ಅರ್ಜಿದಾರರಿಗೆ ತಿಳಿಸುತ್ತಾರೆ ಎಂದು ವಿವರಿಸಿದರು. ನಂತರ ಸದರಿ ದಾಖಲೆ ಪತ್ರದ ನೋಂದಣಿಗೆ ಸಮಯಾವಕಾಶವನ್ನು ನಿಗದಿಗೊಳಿಸಲಾಗುತ್ತದೆ. ಹೀಗೆ ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಅರ್ಜಿದಾರರು ಹೋದರೆ ಅವರ ಹೆಬ್ಬೆಟ್ಟು ಗುರುತು ಮತ್ತು ಸಹಿ ಪಡೆದು ನೋಂದಣಿ ಪ್ರಕ್ರಿಯೆಯನ್ನು ಐದೇ ನಿಮಿಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದರು.
ನೋಂದಣಿಯ ನಂತರ ಅದರ ಪ್ರತಿಯನ್ನು ಪಡೆಯಲೂ ಅರ್ಜಿದಾರರು ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಕಾಯಬೇಕಿಲ್ಲ. ಬದಲಿಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಅರ್ಜಿದಾರರ ಡಿ.ಜಿ ಲಾಕರ್ಗೆ ಅದರ ಪ್ರತಿ ರವಾನೆಯಾಗುತ್ತದೆ. ಡಿ.ಜಿ.ಲಾಕರ್ ಸುರಕ್ಷಿತವಾಗಿರುವುದರಿಂದ ಈ ನೋಂದಣಿ ದಾಖಲೆಯನ್ನು ಬೇರೆಯವರು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ಈ ಮಧ್ಯೆ ಮನೆ, ಕಟ್ಟಡ, ನಿವೇಶನ ಮತ್ತು ಭೂಮಿಯ ಖರೀದಿಯಲ್ಲಿ ಯಾರೂ ಮೋಸ ಹೋಗದಂತೆ ತಡೆಯಲು ಸರ್ಕಾರವೇ ಏಜೆನ್ಸಿಗಳನ್ನು ಪ್ರಾರಂಭಿಸಲಿದ್ದು, ಇದರ ರೂಪು ರೇಷೆಗಳು ಸಿದ್ಧವಾಗುತ್ತಿವೆ ಎಂದರು. ಸಂಬಂಧಿತ ಆಸ್ತಿಯ ಖರೀದಿಯಲ್ಲಿ ಯಾವುದಾದರೂ ಸಮಸ್ಯೆ ಇದೆಯೇ? ಅಥವಾ ಸಮಸ್ಯೆ ಇಲ್ಲವೇ? ಎಂಬುದನ್ನು ಸರ್ಕಾರದ ಏಜೆನ್ಸಿಯೇ ಪರಿಶೀಲಿಸಿ ಗ್ರೀನ್ ಸಿಗ್ನಲ್ ನೀಡುತ್ತದೆ. ಆ ಮೂಲಕ ಒಂದೇ ನಿವೇಶನ ಮತ್ತು ಆಸ್ತಿಯನ್ನು ಹಲವು ಕಡೆ ಮಾರುವುದರಿಂದ ಹಿಡಿದು ಹಲವು ಬಗೆಯಲ್ಲಿ ವಂಚಿಸುವ ಜಾಲದಿಂದ ಜನ ಬಚಾವಾಗುತ್ತಾರೆ. ಹೀಗೆ ಆಸ್ತಿ ಸರ್ಕಾರದ ಏಜೆನ್ಸಿಗೆ ನಿಗದಿತ ಶುಲ್ಕ ವಿಧಿಸಲಾಗುವುದು. ಈ ವಿಷಯದಲ್ಲೂ ಬೇರೆಯವರಿಗೆ ಲಕ್ಷಾಂತರ ರೂಪಾಯಿ ಹಣ ಕೊಡುವ ಅನಿವಾರ್ಯತೆಯನ್ನು ಖರೀದಿದಾರರಿಗೆ ತಪ್ಪಿಸಿದಂತಾಗುತ್ತದೆ ಎಂದು ಸಚಿವರು ವಿವರಿಸಿದರು.
ಆಸ್ತಿ ನೋಂದಣಿಯ ರಿಯಾಯಿತಿಯಿಂದ ಹೆಚ್ಚಿದ ಆದಾಯ: ಆಸ್ತಿ ನೋಂದಣಿ ಮಾಡಿಸಲು ಶೇಕಡಾ ಹತ್ತರಷ್ಟು ರಿಯಾಯ್ತಿ ನೀಡಿದ ಪರಿಣಾಮವಾಗಿ ಸರ್ಕಾರದ ಆದಾಯ ಹೆಚ್ಚಿದ್ದು ಕಳೆದ ಮೂರು ತಿಂಗಳಲ್ಲಿ 6,700 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಸಂಗ್ರಹವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಅವಧಿಯಲ್ಲಿ 1,900 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಆದಾಯ ಸಂಗ್ರಹವಾಗಿದ್ದು, ಇತಿಹಾಸದಲ್ಲೇ ಇದು ದಾಖಲೆ ಎಂದರು. ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಬಾಬ್ತಿನಲ್ಲಿ ಈ ವರ್ಷ ಹದಿನಾಲ್ಕು ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದ್ದು ಮೂರೇ ತಿಂಗಳಲ್ಲಿ 6,700 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಸಂಗ್ರಹವಾಗಿದೆ ಎಂದು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ರೈತರು ಒತ್ತುವರಿ ಮಾಡಿರುವ ಒಂದು ಲಕ್ಷ ಎಕರೆಗೂ ಹೆಚ್ಚಿನ ಭೂಮಿಯನ್ನು ಅವರಿಗೇ ಗುತ್ತಿಗೆ ಆಧಾರದ ಮೇಲೆ ನೀಡುವ ಸಂಬಂಧ ತಿದ್ದುಪಡಿ ಮಸೂದೆಯನ್ನು ಸಿದ್ದಪಡಿಸಲಾಗಿದ್ದು, ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು. ಇದೇ ರೀತಿ ಭೂ ಪರಿವರ್ತನೆ ಕಾರ್ಯವನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದ ತಿದ್ದುಪಡಿ ಮಸೂದೆಯನ್ನು ಸಿದ್ದಪಡಿಸಲಾಗಿದ್ದು ಅದನ್ನೂ ಈ ಬಾರಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದರು.
ಇದನ್ನೂ ಓದಿ: ಶಿಕ್ಷಕರಿಗೆ ಶಿಸ್ತಿನ ಪಾಠ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ