ಬೆಂಗಳೂರು: ಬೇರೆ ರಾಜ್ಯಗಳಿಗೆ ಹೋಗುವ ಕೂಲಿ ಕಾರ್ಮಿಕರನ್ನು ಬಲವಂತವಾಗಿ ತಡೆದಿಲ್ಲ. ಅವರನ್ನು ತಡೆಯುವುದೂ ಇಲ್ಲ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತುಮಕೂರಿನಲ್ಲಿ ವಿಮಲ್ ಗುಟ್ಕಾ ಕಂಪನಿಯಲ್ಲಿ ಕೆಲಸ ಮಾಡುವ 400 ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ.
ಹೀಗಾಗಿ ಕಾರ್ಮಿಕರು ಊರಿಗೆ ಹೊರಟಿದ್ದರು. ನಾವು ವಿಮಲ್ ಕಂಪನಿಯಯವರ ಜೊತೆ ಚರ್ಚೆ ಮಾಡಿದ್ದೇವೆ. ಕಾರ್ಮಿಕರಿಗೆ ತಲಾ 20 ಸಾವಿರ ಸಂಬಳ ಹಾಕಲು ಕಂಪನಿ ಒಪ್ಪಿದೆ. ಹೀಗಾಗಿ ಕಾರ್ಮಿಕರು ಒಪ್ಪಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುರಿತು ಮಾತನಾಡಿದ ಆರ್.ಅಶೋಕ್, ನೀವು ಸ್ಮಾರ್ಟ್ ಆಗಿ, ಓವರ್ ಸ್ಮಾರ್ಟ್ ಆಗಬೇಡಿ. ನೀವು ಹೊಸದಾಗಿ ಕೆಪಿಸಿಸಿ ಅಧ್ಯಕ್ಷಗಿರಿ ಏರಿದ್ದೀರಿ ಅಂತ ಗೊತ್ತಿದೆ. ಹೊಸದಾಗಿ ಮದುವೆ ಆದಾಗ ಎಲ್ಲೆಲ್ಲೋ ಹೋಗಬೇಕು ಅನಿಸುತ್ತೆ. ಡಿಕೆಶಿಗೆ ಅದೇ ರೀತಿ ಆಗಿದೆ. ಡಿಕೆಶಿ ಮಾತಿಗೆ ನಾವು ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಅವರಿಗೆ ಹಣ ಕೊಡಬೇಕು ಅಂತಿದ್ರೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೆ 20 ಸಾವಿರ ನೀಡಲಿ. ಜನರಿಗೆ ಸಹಾಯ ಆಗುತ್ತದೆ. ಆದ್ರೆ ಡಿ.ಕೆ.ಶಿವಕುಮಾರ್ ಅವರೇ ನಿಮ್ಮ ಅಕ್ಕಪಕ್ಕದಲ್ಲಿ ಸಿದ್ದರಾಮಯ್ಯ ಮತ್ತು ಜಿ.ಪರಮೇಶ್ವರ್ ಇದ್ದಾರೆ ಎಂದರು.
ಲಾಕ್ಡೌನ್ ರೂಲ್ಸ್ ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. ಪಶ್ಚಿಮ ಬಂಗಾಳ ಸರ್ಕಾರ ಇಲ್ಲಿನ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ಒಪ್ಪಿಲ್ಲ. 9,600 ಜನ ಈಗಾಗಲೇ ರೈಲಿನ ಮೂಲಕ ಬೇರೆ ಬೇರೆ ರಾಜ್ಯಗಳಿಗೆ ಹೋಗಿದ್ದಾರೆ. 86 ಸಾವಿರ ಕಾರ್ಮಿಕರು ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಬೆಂಗಳೂರಿನಿಂದ ಹೋಗಿದ್ದಾರೆ ಎಂದರು.