ಬೆಂಗಳೂರು: ರಾಹುಲ್ ಗಾಂಧಿ ರಾಜ್ಯದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಾಜಿ ಉಪ ಮುಖ್ಯಮಂತ್ರಿ ಆರ್. ಆಶೋಕ್ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಾರೆನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದು, ಅಂತಿಮವಾಗಿ ರಾಹುಲ್ ಗಾಂಧಿ ಚುನಾವಣೆಗೆ ನಿಲ್ಲಲು ಮುಂದಾದರೆ ಅವರನ್ನು ಚುನಾವಣೆಯಲ್ಲಿ ಎದುರಿಸಲು ಅಶೋಕ್ ಮಾನಸಿಕವಾಗಿ ಸಿದ್ಧವಾಗುತ್ತಿದ್ದಾರೆ.
ಬಿಜೆಪಿ ಸಹ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಇನ್ನೂ ತನ್ನ ಅಭ್ಯರ್ಥಿಯನ್ನ ಘೋಷಿಸಿಲ್ಲ. ಸದ್ಯದ ಮಾಹಿತಿ ಪ್ರಕಾರ ಹಾಲಿ ಸಂಸದರಾದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಹೋದರ ನಿಲ್ಲುವುದು ಬಹುತೇಕ ಖಚಿತವಾಗಿದೆ.
ಡಿ ಕೆ ಸುರೇಶ್ ಎದುರಿಸಲು ಬಿಜೆಪಿಯು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅಥವಾ ಅವರ ಪುತ್ರಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಎರಡನೇ ಪಟ್ಟಿಯಲ್ಲಿ ಈ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ.
ಬದಲಾದ ರಾಜಕೀಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಏನಾದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಬಿಜೆಪಿ ಸಹ ರಾಹುಲ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗುತ್ತದೆ. ಆಗ ತೀವ್ರ ಸ್ಪರ್ಧಾಳುವಾಗಿ ಆರ್. ಅಶೋಕ್ ಕಮಲದಿಂದ ಕಣಕ್ಕಿಳಿಯಲು ಆಸಕ್ತಿ ವಹಿಸಲಿದ್ದಾರೆ. ಅಷ್ಟೇ ಅಲ್ಲ ಪಕ್ಷದ ವೇದಿಕೆಯಲ್ಲಿ ರಾಹುಲ್ ವಿರುದ್ಧ ಚುನಾವಣೆಗೆ ನಿಲ್ಲುವ ಇಂಗಿತವನ್ನೂ ಸಹ ಅಶೋಕ್ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ' ಈ ಟಿವಿ ಭಾರತಕ್ಕೆ ' ತಿಳಿಸಿವೆ.
ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಉತ್ತರಪ್ರದೇಶದ ಅಮೇಥಿಯಲ್ಲಿ ಬಿಜೆಪಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಕಣಕ್ಕಿಳಿಸಿದ್ದು, ಈ ಮುಖಂಡರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟು ರಾಹುಲ್ ಗಾಂಧಿ ಸೋತರೂ ಸೋಲ ಬಹುದೆನ್ನುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಪಕ್ಷದ ಪ್ರಧಾನಿ ಅಭ್ಯರ್ಥಿಯೇ ಸೋತರೆ ತೀವ್ರ ಮುಜುಗರವಾಗುತ್ತದೆ ಎನ್ನುವ ಕಾರಣಕ್ಕೆ ಗೆಲುವಿಗೆ ಸುರಕ್ಷಿತ ಕ್ಷೇತ್ರವನ್ನು ರಾಹುಲ್ ಗಾಂಧಿ ಹುಡುಕುತ್ತಿದ್ದಾರೆಂದು ಹೇಳಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ಮುಖಂಡರು ರಾಹುಲ್ ಗಾಂಧಿಗೆ ರಾಜ್ಯದಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮತಗಳು ಹೆಚ್ಚಿರುವ ಬೆಂಗಳೂರು ಗ್ರಾಮಾಂತರ, ಕೊಪ್ಪಳ ಸೇರಿದಂತೆ ಯಾವುದಾದರೂ ಗೆಲುವಿಗೆ ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರಕ್ಕೆ ರಾಹುಲ್ ಗಾಂಧಿ ಬರಬಹುದು ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡತೊಡಗಿದೆ.
ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ( ಚಿಕ್ಕಮಗಳೂರು ), ತಾಯಿ ಸೋನಿಯಾ ಗಾಂಧಿ ( ಬಳ್ಳಾರಿ ) ರಾಜ್ಯದಿಂದ ಸ್ಪರ್ಧಿಸಿ ಗೆಲುವನ್ನ ಸಾಧಿಸಿದ್ದರು. ಹಾಗಾಗಿ ರಾಹುಲ್ ಗಾಂಧಿಗೆ ರಾಜ್ಯದಿಂದ ಸ್ಪರ್ಧಿಸಲು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದಾರೆ.
ರಾಹುಲ್ ಗಾಂಧಿ ಕರ್ನಾಟಕದಿಂದ ಕಣಕ್ಕಿಳಿಯುವುದೇ ಅಂತಿಮವಾದರೆ ರಾಜ್ಯದ ಚುನಾವಣೆ ಕಣ ಮತ್ತಷ್ಟು ರಂಗು ಪಡೆಯಲಿದೆ. ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಹಣಾಹಣಿ ಜೋರಾಗೇ ಏರ್ಪಡಲಿದೆ.