ಬೆಂಗಳೂರು: ಮಂಗಳವಾರ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಘೋಷಣೆ ಮಾಡಿದ್ದರೂ, ಕಡೇ ಕ್ಷಣದಲ್ಲಿ ಜೆಡಿಎಸ್ನ ಎಂಟು ಮಂದಿ ಮುಖಂಡರು ಮತದಾನ ಮಾಡದೇ ತಟಸ್ಥರಾಗಿದ್ದರು ಎನ್ನುವ ಈ ವಿಚಾರವನ್ನು ಸಿಎಂ ಬಿಎಸ್ವೈ ಬಳಿ ಸಚಿವ ಅಶೋಕ್ ಪ್ರಸ್ತಾಪಿಸಿದ್ದಾರೆ.
ಎಂಟು ಜನ ಬಿಜೆಪಿ ಪರ ವೋಟ್ ಹಾಕಿದ್ರು. ಜೆಡಿಎಸ್ನ 14 ಜನರಲ್ಲಿ 8 ಜನ ಬಿಜೆಪಿ ಪರ ಮತ ಹಾಕಿದ್ದರು. ಇದು ಸಹಜವಾಗಿಯೇ ಎಲ್ಲರಿಗೂ ಆಶ್ಚರ್ಯ ಆಯಿತು. ಕೈ ಎತ್ತಿದ್ದರೂ ಸಹ, ಸಹಿ ಹಾಕಲಿಲ್ಲ. ಮಾರ್ಜಿನ್ನಲ್ಲೇ ಗೆಲ್ಲಬೇಕು ಅಂತ ತಲೆಯಲ್ಲಿ ಲೆಕ್ಕ ಹಾಕಿದ್ದೆವು. 4- 5ರಲ್ಲಿ ಗೆಲ್ಲಬೇಕು ಅಂತ ತಲೆಯಲ್ಲಿ ಇತ್ತು. ಕಡೆಗೆ ಜೆಡಿಎಸ್ ಮನವೊಲಿಸಿ 27 ಮತಗಳ ಬಹುಮತದಿಂದ ಗೆದ್ದೆವು ಎಂದು ಸಚಿವ ಅಶೋಕ್ ಸಿಎಂ ಬಳಿ ವಿವರಿಸಿದ್ದಾರೆ.
ಮೇಯರ್ - ಉಪ ಮೇಯರ್ಗೆ ಸಿಎಂ ಶುಭಾಶಯ: ಬಿಬಿಎಂಪಿ ನೂತನ ಮೇಯರ್ ಗೌತಮ್ ಕುಮಾರ್ ಹಾಗೂ ಉಪಮೇಯರ್ ರಾಮ್ ಮೋಹನ್ ರಾಜ್ಗೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಅಭಿನಂದನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಿಎಂ ಬಿಎಸ್ವೈ ಪಾಲಿಕೆಯ ಕಳೆದ ನಾಲ್ಕು ವರ್ಷದಲ್ಲಿ ಏನೆಲ್ಲ ಹಗರಣ ನಡೆದಿದೆ ಅವುಗಳನ್ನು ಬಹಿರಂಗ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇದರಿಂದ ಇನ್ನೊಂದು ವರ್ಷದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ 150 ಸೀಟ್ ಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಈ ಜವಾಬ್ದಾರಿ ಇವರಿಬ್ಬರ ಮೇಲಿದೆ ಎಂದರು. ಬಿಬಿಎಂಪಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಶೋಕ್, ವಿಶ್ವನಾಥ್ ಅವರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.
ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಬಿಜೆಪಿಗೆ ಮತ: ಕಡೆ ಕ್ಷಣದಲ್ಲಿ ಬಿಜೆಪಿ , ಜೆಡಿಎಸ್ ಮುಖಂಡರಿಗೆ ಆಮಿಷ ಒಡ್ಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಮೇಯರ್ ಉತ್ತರಿಸಿ ಪ್ರಜಾಪ್ರಭುತ್ವದಲ್ಲಿ ಯಾರಿಗೂ ಒತ್ತಾಯ ಮಾಡಲು ಆಗಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜೆಡಿಎಸ್ಗೆ ಬೇಸರ ಆಗಿದೆ. ಅಭಿವೃದ್ಧಿ ಕೆಲಸ ಮಾಡಲಾಗಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್ ಪರ ಮತ ಹಾಕಿಲ್ಲ ಎಂದರು.