ಬೆಂಗಳೂರು: ಮೈ ಶುಗರ್ ಕಾರ್ಖಾನೆಯನ್ನು ಲೀಸ್ಗೆ ಕೊಡಬೇಕಾ ಅಥವಾ ಒ ಅಂಡ್ ಎಂ ಮಾಡಬೇಕಾ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮೈ ಶುಗರ್ ಸಂಸ್ಥೆ, ಮಂಡ್ಯ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳ ವಿಚಾರವಾಗಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಮೈ ಶುಗರ್ ಕಂಪನಿಯ 330 ನೌಕರರು ವಿಆರ್ಎಸ್ ಪಡೆಯಲು ಸಿದ್ಧರಾಗಿದ್ದಾರೆ. ಅದಕ್ಕಾಗಿ 22 ಕೋಟಿ ರೂ. ಬೇಕಾಗುತ್ತದೆ. ಹೀಗಾಗಿ ವಿಆರ್ಎಸ್ ಕೊಟ್ಟು ಅವರನ್ನು ಕಳುಹಿಸಿಕೊಡಲಾಗುವುದು ಎಂದು ವಿವರಿಸಿದರು.
ಮೈ ಶುಗರ್‌ನನ್ನು ಲೀಸ್ಗೆ ಕೊಡಬೇಕಾ ಅಥವಾ ಒ ಅಂಡ್ ಎಂ ಮಾಡಬೇಕಾ ಎಂಬ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಒಂದು ವೇಳೆ ಒ ಅಂಡ್ ಎಂ ಮಾಡಿದರೆ ಪ್ರತಿ ವರ್ಷ 25 ಕೋಟಿ ರೂ. ನೀಡಬೇಕು. ಆಗಲೇ ಮೈ ಶುಗರ್ ಕಾರ್ಖಾನೆಗೆ ಸಾಕಷ್ಟು ದುಡ್ಡು ಕೊಡಲಾಗಿದೆ. ಇದರಿಂದ ಸರ್ಕಾರಕ್ಕೆ ಹೊರೆ ಆಗುತ್ತಿದೆ. ಈ ಸಂಬಂಧ ಮತ್ತೆ ಅಧಿಕಾರಿಗಳ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಲೀಸ್ಗೆ ಕೊಡಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕೂಡಲೇ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಲೀಸ್ ಮೇಲೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಮಗೆ ಕಾಯಂ ಪರಿಹಾರ ಬೇಕು:
ಸಭೆ ಬಳಿಕ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅವರು, ನಮಗೆ ಕಾಯಂ ಪರಿಹಾರ ಬೇಕು. ಮೈ ಶುಗರ್‌ನನ್ನು ಅಧಿಕಾರಿಗಳು ಲೀಸ್ಗೆ ಕೊಡುವುದು ಒಳ್ಳೇದು ಅಂತಿದ್ದಾರೆ. ಆದರೆ, ಒ ಅಂಡ್ ಎಂ ಕೊಡಿ ಎಂಬುದು ನಮ್ಮ ಬೇಡಿಕೆ. ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲು ಸಿಎಂ ನಿರ್ಧರಿಸಿದ್ದಾರೆ. ಸರ್ಕಾರ ಈಗಾಗಲೇ ಸುಮಾರು 400 ಕೋಟಿ ರೂ. ನೀಡಿದೆ. ಆದರೆ, ಸಮಸ್ಯೆ ಮಾತ್ರ ಹಾಗೆ ಮುಂದುವರೆದಿದೆ. ನಮಗೆ ಕಾಯಂ ಪರಿಹಾರ ಬೇಕು ಎಂದು ಸ್ಪಷ್ಟಪಡಿಸಿದರು.
ಕಬ್ಬು ಅರೆಯಲು ಸಮಸ್ಯೆ ಆಗಬಾರದು:
ರೈತರ ಕಬ್ಬು ಅರೆಯುವುದಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೂ ಸಹ ತೊಂದರೆ ಆಗಬಾರದು. ಹಾಗಾಗಿ ಸಕ್ಕರೆ ಕಾರ್ಖಾನೆಗಳಿಗೆ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಒಂದು ಪರಿಹಾರ ಕಂಡುಹಿಡಿಯಿರಿ. ಕಾರ್ಖಾನೆಗಳು ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಬಾರದು. ಇದರಿಂದ ರೈತರಿಗೆ ತೊಂದರೆ ಅಗಬಾರದು. ಕಾರ್ಖಾನೆಗಳು ಸಹ ಲಾಭಕ್ಕೆ ಮರಳಬೇಕು. ರೈತರಿಗೂ ಸಹ ಒಳ್ಳೆಯ ಆದಾಯ ಬರಬೇಕು. ಈ ರೀತಿಯ ಒಂದು ಪರಿಹಾರ ಕಂಡುಹಿಡಿಯಿರಿ ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಕಂಪನಿಯ ಈಗಿನ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು. ಕಬ್ಬು ನುರಿಯುವ ಸಾಮರ್ಥ್ಯವನ್ನು 5,000ಕ್ಕೆ ಹೆಚ್ಚಿಸಬೇಕು. ಕೊನ್ನಳ್ಳಿ ಕೆರೆ ವಾಟರ್ ಲಯನ್ ಸ್ವಚ್ಛಗೊಳಿಸುವ ಕೆಲಸ ಮತ್ತು ಹೆಬ್ಬಾಳ ನೀರಿನ ಮಾರ್ಗವನ್ನು ಸರಿಪಡಿಸಕಾಗಿದೆ. ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ವಿಸಬೇಕಾಗಿದೆ ಅಂತಾ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಮತ್ತು ಶಾಸಕ ಪುಟ್ಟರಾಜು ಮಂಡ್ಯ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಿನ ಅನುದಾನ ನೀಡಿದರೆ ಅನುಕೂಲ ಆಗುತ್ತದೆ ಎಂದರು.