ಬೆಂಗಳೂರು: ಸಾರ್ವಜನಿಕ ಗ್ರಾಂಥಾಲಯಗಳ ಮೇಲ್ವಿಚಾರಕರಿಗೆ ಕನಿಷ್ಠ ವೇತನ ನೀಡುವುದನ್ನು ತಪ್ಪಿಸುವ ಸಲುವಾಗಿ ಗ್ರಂಥಾಲಯಗಳ ಸಮಯವನ್ನು ಕಡಿತಗೊಳಿಸಲಾಗಿದೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಜೆಡಿಎಸ್ ಶ್ರೀಕಂಠೇಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ವಿಧಾನ ಪರಿಷತ್ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶ್ರೀಕಂಠೇಗೌಡ, ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರು ಯಾವುದೇ ಸರ್ಕಾರಿ ಸವಲತ್ತಿಲ್ಲದೆ ಕೇವಲ ಗೌರವಧನ ಮಾತ್ರ ಪಡೆಯುತ್ತಿದ್ದಾರೆ. ಈಗ ಅವರಿಗೆ ಕನಿಷ್ಠ ವೇತನ ನಿಗದಿಪಡಿಸಲಾಗಿದೆ. 8 ಗಂಟೆ ಕರ್ತವ್ಯ ನಿರ್ವಹಿಸಿದರೆ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಸಿಗಲಿದೆ. ಆದರೆ ಗ್ರಂಥಾಲಯದ ಅವಧಿಯನ್ನು 4 ಗಂಟೆ ಕಡಿತ ಮಾಡಿ ಅವರಿಗೆಲ್ಲಾ ಕನಿಷ್ಠ ವೇತನ ಸಿಗದಂತೆ ಮಾಡಲಾಗಿದೆ. ಈ ಕೂಡಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಇದು ಶಿಕ್ಷಣ ಸಚಿವ ಸುರೇಶ್ ಕುಮಾರ್ ವ್ಯಾಪ್ತಿಗೆ ಬರುವುದಿಲ್ಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ವ್ಯಾಪ್ತಿಗೆ ಬರಲಿದೆ. ಅವರಿಂದ ಉತ್ತರ ಕೊಡಿಸುವುದಾಗಿ ಸದನಕ್ಕೆ ಭರವಸೆ ನೀಡಿದರು.
ಕೃಷ್ಣರಾಯ ವಿವಿ ಕಾಲೇಜುಗಳಲ್ಲಿ ಡಿಇಡಿ ಸೀಟು ಮಾರಾಟ
ವಿಜಯನಗರದಲ್ಲಿರುವ ಕೃಷ್ಣದೇವರಾಯ ಕನ್ನಡ ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಲ ಕಾಲೇಜುಗಳಲ್ಲಿ ಡಿಇಡಿ ಸೀಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಬಿಜೆಪಿ ಸದಸ್ಯ ಎಸ್.ವಿ ಸಂಕನೂರ್ ಒತ್ತಾಯಿಸಿದರು.
ವಿಧಾನ ಪರಿಷತ್ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ವಿಜಯನಗರ ಕೃಷ್ಣದೇವರಾಯ ವಿವಿಯ ಕೆಲ ಕಾಲೇಜುಗಳು ಡಿಎಡ್ ಸೀಟುಗಳನ್ನು ಮಾರಾಟ ಮಾಡಲಾಗುತ್ತಿದೆ. ಕೆಲ ಕಾಲೇಜುಗಳಲ್ಲಿ ಹಣ ಪಡೆದು ಹೆಚ್ಚಿನ ಅಂಕಗಳನ್ನು ನೀಡಲಾಗುತ್ತದೆ ಎನ್ನುವ ಆರೋಪ ಇದೆ, ಸೀಟು ಮಾರಿಕೊಳ್ಳುವ ಇಂತಹ ಪ್ರವೃತ್ತಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಡಿಸಿಎಂ ಅಶ್ವತ್ಥನಾರಾಯಣ್ ಅವರಿಂದ ಉತ್ತರ ಕೊಡಿಸುವುದಾಗಿ ಸದನಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಮಲಪ್ರಭಾ ನದಿಗೆ ಕಲುಷಿತ ನೀರು
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಹರಿಯುವ ಮಲಪ್ರಭಾ ನದಿಗೆ ತ್ಯಾಜ್ಯ ನೀರನ್ನು ಶುದ್ಧೀಕರಿಸದೆ ಬಿಡುತ್ತಿರುವ ಕಾರಣ ನದಿ ನೀರು ಮಲಿನವಾಗುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಬಿಜೆಪಿ ಸದಸ್ಯ ಹನುಮಂತ ನಿರಾಣಿ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನ ಪರಿಷತ್ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಹನುಮಂತ ನಿರಾಣಿ, ಖಾನಾಪುರ ತಾಲೂಕಿನಲ್ಲಿ ಹರಿಯುವ ಮಲಪ್ರಭಾ ನದಿಗೆ ಪಟ್ಟಣದ ನೀರನ್ನು ಶುದ್ದೀಕರಿಸದೆ ಕೊಳಚೆ ನೀರು ಹರಿಸಿ ನದಿಯನ್ನು ಅಶುದ್ದಗೊಳಿಸಲಾಗುತ್ತಿದೆ. ಇದರಿಂದಾಗಿ ನದಿ ನೀರು ವಿಷಯುಕ್ತವಾಗುತ್ತಿದೆ. ಮುಂದೆ ಹರಿಯುತ್ತಾ ಈ ನದಿ ಕೃಷ್ಣಾ ನದಿಯನ್ನು ಸೇರಲಿದ್ದು ಆ ನದಿ ನೀರು ಕೂಡ ಮಲಿನವಾಗಿ ನದಿ ಹರಿಯುವ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತನ್ನಿ: ಎನ್ಪಿಎಸ್ಗೆ ಪರಿಷತ್ನಲ್ಲಿ ಪಕ್ಷಾತೀತ ವಿರೋಧ!