ಬೆಂಗಳೂರು: ವಿದೇಶಗಳಿಂದ ಪ್ರಯಾಣಿಸುವವರಲ್ಲಿ ಒಮಿಕ್ರಾನ್ ಹೆಚ್ಚು ದೃಢಪಡುತ್ತಿರುವ ಹಿನ್ನೆಲೆ, ಹೆಚ್ಚಿನ ನಿಗಾವಹಿಸಿ ಟೆಸ್ಟ್ ಮಾಡಲಾಗುತ್ತಿದೆ. ಸದ್ಯ ಪಾಸಿಟಿವ್ ಬಂದವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ನೆಗೆಟಿವ್ ಬಂದವರನ್ನು ಮನೆಗೆ ಕಳಿಸಲಾಗುತ್ತಿದೆ.
ಒಮಿಕ್ರಾನ್ ಏರಿಕೆಯಾಗುವ ಭೀತಿ ಇರುವುದರಿಂದ ನೆಗೆಟಿವ್ ಬಂದವರನ್ನೂ 7 ದಿನ ಕ್ವಾರಂಟೈನ್ಗೆ ಒಳಪಡಿಸಿ, ಏರ್ಪೋರ್ಟ್ ಸುತ್ತಲಿನ ಹೋಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲು ಬಿಬಿಎಂಪಿ ಪಟ್ಟಿ ಸಿದ್ಧಪಡಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಆರೋಗ್ಯ ಅಧಿಕಾರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ತಿಳಿಸಿದ್ದಾರೆ.
ಏರ್ಪೋರ್ಟ್ನಲ್ಲಿ ನೆಗೆಟಿವ್ ಬಂದು ಮತ್ತೆರಡು ದಿನದಲ್ಲೇ ಪಾಸಿಟಿವ್ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಬಿಬಿಎಂಪಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರಿಂದ ಬೆಂಗಳೂರನ್ನು ಒಮಿಕ್ರಾನ್ನಿಂದ ಸುರಕ್ಷಿತವಾಗಿಡಲು ಸಾಧ್ಯ ಎಂದು ಚಿಂತಿಸಿದ್ದಾರೆ.
ಜೀನೋಮ್ ಸೀಕ್ವೆನ್ಸಿಂಗ್ಗೆ ಒತ್ತು: ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಕಂಡುಬಂದಿರುವುದರಿಂದ ಪ್ರತಿದಿನ 150 ಸ್ಯಾಂಪಲ್ಗಳನ್ನು ವಂಶವಾಹಿ ಪರಿಶೀಲನೆಗೆ ಕಳಿಸಲಾಗುತ್ತಿದೆ. ಸದ್ಯ ನಗರದಲ್ಲಿ 102 ಕ್ಲಸ್ಟರ್ಗಳಿದ್ದು, ಈ ಪೈಕಿ 52 ಅಪಾರ್ಟ್ಮೆಂಟ್ಗಳಿವೆ. ಕ್ಲಸ್ಟರ್ಗಳಿಂದಲೂ ಆಸ್ಪತ್ರೆಗೆ ದಾಖಲಾದವರ ಸ್ಯಾಂಪಲ್ಗಳನ್ನು ಜೀನೊಮ್ ಸೀಕ್ವೆನ್ಸಿಂಗ್fಗೆ ಕಳಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.
ಚರಂಡಿ ನೀರಿನ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದ್ದು, ಯಾವ ಪ್ರದೇಶದಲ್ಲಿ ಹೆಚ್ಚು ಒಮಿಕ್ರಾನ್ ಹರಡುತ್ತಿದೆ ಎಂಬುದನ್ನೂ ಆರಂಭದಲ್ಲಿಯೇ ಪತ್ತೆಹಚ್ಚಲು ಸಾಧ್ಯ ಎಂದು ಬಾಲಸುಂದರ್ ತಿಳಿಸಿದರು.
ಸಮುದಾಯ ಮಟ್ಟಕ್ಕೆ ಒಮಿಕ್ರಾನ್ ರೂಪಾಂತರಿ ಹರಡಿದೆಯಾ ಎಂಬ ಬಗ್ಗೆ ಪರೀಕ್ಷಿಸಲು ಬಿಬಿಎಂಪಿ ಕೋವಿಡ್ ಹೆಚ್ಚಿರುವ ಪ್ರದೇಶಗಳ ಸ್ಯಾಂಪಲ್ ಸಂಗ್ರಹಿಸಿ, ವಂಶವಾಹಿ ಪರಿಶೀಲನೆಗೆ (ಜೀನೋಮ್ ಸೀಕ್ವೆನ್ಸಿಂಗ್ ) ಕಳಿಸಲಾಗುತ್ತಿದೆ. ಸದ್ಯ ಕೋವಿಡ್ ಪರೀಕ್ಷೆ ಏರಿಕೆ ಮಾಡಿದ್ದರೂ, ಹೆಚ್ಚು ಒಮಿಕ್ರಾನ್ ಪ್ರಕರಣ ಕಂಡುಬರುತ್ತಿಲ್ಲ ಎಂದರು.