ಬೆಂಗಳೂರು: ಪೊಲೀಸ್ ಠಾಣೆಗೆ ಬರುವ ದೂರುದಾರರು ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಸುಧಾರಿಸಲು 'ಕ್ಯೂ ಆರ್ ಕೋಡ್ ಸಿಸ್ಟಂ' ಜಾರಿಗೊಳಿಸಲಾಗಿತ್ತು. ನಗರದ ಆಗ್ನೇಯ ವಿಭಾಗದಲ್ಲಿ ಯೋಜನೆ ಜಾರಿಯಾದ ಎರಡನೇ ದಿನದಿಂದಲೇ ದೂರುಗಳ ಸುರಿಮಳೆ ಬಂದಿದ್ದು ಈವರೆಗೂ ಆಗ್ನೇಯ ವಿಭಾಗದಲ್ಲಿರುವ 14 ಪೊಲೀಸ್ ಠಾಣೆಗಳಲ್ಲಿ ಒಟ್ಟು 1201 ಜನರು ಭೇಟಿ ಮಾಡಿ ತನ್ನ ಫೀಡ್ ಬ್ಯಾಕ್ ನೀಡಿದ್ದಾರೆ.
1201 ದೂರುಗಳ ಪೈಕಿ 800 ಮಂದಿ ಒಳ್ಳೆಯ ಅಭಿಪ್ರಾಯ ನೀಡಿದ್ದು, ಉಳಿದ 400 ಮಂದಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಬಾರಿ ವಿವಿಧ ಕಾರಣಗಳಿಗಾಗಿ ಎಡತಾಕುವ ಸಂದರ್ಶಕರು ಪೊಲೀಸರ ಸ್ಪಂದನೆ ಕುರಿತಂತೆ ತಮ್ಮ ಅಭಿಪ್ರಾಯ ತಿಳಿಸಬಹುದಾಗಿದ್ದು ಹೆಸರು, ಮೊಬೈಲ್ ನಂಬರ್, ಠಾಣೆಯ ಹೆಸರು, ಯಾವ ಉದ್ದೇಶಕ್ಕಾಗಿ ಭೇಟಿ ಮಾಡಿರುವುದು, ಪೊಲೀಸರು ಸ್ಪಂದನಾ ಸಮಯ ಎಷ್ಟು? ಪೊಲೀಸರ ವರ್ತನೆ ಹೇಗಿತ್ತು? ಠಾಣೆಗೆ ಭೇಟಿ ನೀಡಿದ್ದು ತೃಪ್ತಿಕರವಾಗಿದೆಯಾ? ಸೇರಿದಂತೆ 12 ಪ್ರಶ್ನೆಗಳನ್ನು ಕೇಳಲಾಗಿದೆ.
ಈ ಪೈಕಿ 400 ಮಂದಿ ಸಂದರ್ಶಕರು ದೂರು ಕೊಡಲು ಬಂದರೆ ಗಂಟೆಗಟ್ಟಲೇ ಕಾಯಿಸುತ್ತಾರೆ. ಸರಿಯಾಗಿ ಮಾತನಾಡುವುದಿಲ್ಲ. ನಾಳೆ-ನಾಳಿದ್ದು ಬನ್ನಿ ಅಂತಾ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಾರೆ ಎಂದು ದೂರಿನಲ್ಲಿ ಅಭಿಪ್ರಾಯ ನೀಡಿದ್ದಾರೆ. ಕೇಸ್ ಬೇಧಿಸಿದ ಬಳಿಕ ಕರೆ ಮಾಡುತ್ತೇವೆ, ಪದೇ ಪದೇ ಠಾಣೆಗೆ ಬರಬೇಡಿ ಎಂದು ಹೇಳುತ್ತಾರೆ. 50ಕ್ಕಿಂತ ಅಧಿಕ ಮಂದಿ ಏಕವಚನದಲ್ಲಿ ಮಾತನಾಡಿದರೆ ಇನ್ನು ಕೆಲವರು ಹಣ ಕೊಟ್ಟರೆ ಕೆಲಸವಾಗುತ್ತೆ ಎಂದು ಸಿಬ್ಬಂದಿ ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೆಚ್ಚು ನೆಗೆಟಿವ್ ದೂರು ಬಂದಿರುವ ಠಾಣಾ ಸಿಬ್ಬಂದಿ ವಿರುದ್ಧ ನಗರ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಕಿಡಿಕಾರಿದರು. ಅಸಮಾಧಾನ ತೋಡಿಕೊಂಡಿರುವ ಸಂದರ್ಶಕರಿಗೆ ಸಿಬ್ಬಂದಿಯಿಂದಲೇ ಕರೆ ಮಾಡಿಸಿ ಮುಂದೆ ಹೀಗಾಗದಂತೆ ಮನವಿ ಮಾಡಿಸಿದ್ದಾರೆ. ದೂರುದಾರರೊಂದಿಗೆ ಉತ್ತಮ ನಡತೆ ತೋರಲು ಅವರೊಂದಿಗೆ ಉತ್ತಮ ಸಂಬಂಧ ಇರಿಸುವ ಸಲುವಾಗಿ 10 ಮಂದಿ ಸಿಬ್ಬಂದಿ ಒಳಗೊಂಡ ಎರಡು ತಂಡ ರಚಿಸಿ ನಿಗಾವಹಿಸುತ್ತಿದೆ.
ಇದನ್ನೂ ಓದಿ :ತ್ವರಿತ ಗತಿಯಲ್ಲಿ ದೂರು ಸ್ವೀಕರಿಸಲು ಆಗ್ನೇಯ ವಿಭಾಗದ ಪೊಲೀಸರಿಂದ ಕ್ಯೂಆರ್ ಕೋಡ್ ಸಿಸ್ಟಂ