ಬೆಂಗಳೂರು : ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಾಂಗ್ರೆಸ್ ಪಕ್ಷ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತೇರದಾಳದ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಕಾಂಗ್ರೆಸ್ ಸದಸ್ಯೆ ಮೇಲೆ ದೌರ್ಜನ್ಯ ನಡೆದಿತ್ತು. ಇದೀಗ ಅವರ ಗರ್ಭಪಾತವಾಗಿದೆ.
ಪ್ರಕರಣವನ್ನು ಬಿಜೆಪಿ ಸರ್ಕಾರ ಗಂಭೀರವಾಗಿ ಸ್ವೀಕರಿಸಿಲ್ಲ. ಈಗಲಾದ್ರೂ ಸರ್ಕಾರ ಎಚ್ಚೆತ್ತುಕೊಂಡು ಶಾಸಕ ಸಿದ್ದು ಸವದಿ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದರು.
ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಮಾಡಿ, ಪಕ್ಷದಿಂದ ಅವರನ್ನು ಉಚ್ಚಾಟಿಸಬೇಕು. ನಮ್ಮ ಧ್ವನಿ ಕರ್ನಾಟಕದ ಹೆಣ್ಣುಮಕ್ಕಳ ಧ್ವನಿಯಾಗಬೇಕು. ಸರ್ಕಾರ ನಮಗೆ ಬೆಲೆ ಕೊಡದಿದ್ದರೆ ನಾವು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ.
ಬಾಗಲಕೋಟೆ ಹಾಗೂ ತೇರದಾಳಕ್ಕೆ ತೆರಳಿ ಅಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ನವೆಂಬರ್ 9ರಂದು ನಡೆದ ಘಟನೆಗೆ ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪೊಲೀಸ್ ಇಲಾಖೆ ಸುಮೋಟೋ ಪ್ರಕರಣ ದಾಖಲಿಸಿ ಸಿದ್ದು ಸವದಿಯನ್ನ ಬಂಧಿಸಬೇಕು. ದೇಶದಲ್ಲಿ ಗರ್ಭಪಾತ ವಿರುದ್ಧ ಕಠಿಣ ಕಾನೂನಿದೆ. ತಾಯಿಯಾಗುವ ಮಹಿಳೆಯ ಹಕ್ಕು ಕಿತ್ತುಕೊಂಡ ಸವದಿ ವಿರುದ್ಧ ಕ್ರಮ ಆಗಬೇಕಿದೆ. ಅಧಿಕಾರ ದಾಹಕ್ಕಾಗಿ ಮಹಿಳೆ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದರು.
ಓದಿ: ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಗಲಾಟೆ: ಸದಸ್ಯೆಯನ್ನು ತಳ್ಳಿದ ಶಾಸಕ ಸವದಿ!