ಬೆಂಗಳೂರು : ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಕೇವಲ ಸಿನಿಮಾ ರಂಗದಲ್ಲಿ ಮಾತ್ರ ಬೇಡಿಕೆಯ ನಟನಾಗಿರಲಿಲ್ಲ. ರಾಯಭಾರಿಯಾಗಿಯೂ ಬಹು ಬೇಡಿಕೆ ಹೊಂದಿದ್ದರು. ಹಲವು ಇಲಾಖೆಗಳ ರಾಯಭಾರಿಯಾಗಿ ಗುರುತಿಸಿಕೊಂಡಿದ್ದರು.
ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ರಾಯಭಾರಿಯಾಗಿ ಪುನೀತ್ ರಾಜ್‌ಕುಮಾರ್ ಜವಾಬ್ದಾರಿ ಹೊತ್ತಿದ್ದರು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ 2020ರ ಮಾರ್ಚ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಈ ಪ್ರಸ್ತಾವನೆಯನ್ನು ಪುನೀತ್ ರಾಜ್‌ಕುಮಾರ್ ಮುಂದಿಡುತ್ತಿದ್ದಂತೆ ಪ್ರಸ್ತಾವಕ್ಕೆ ಪುನೀತ್ ಸಮ್ಮತಿ ನೀಡಿದ್ದರು.
ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟೂ ಬಳಸಿ ಜನರು ಸಹಕರಿಸಬೇಕು ಎಂದು ಜನರನ್ನು ಪ್ರೇರೇಪಿಸಲು ಪುನೀತ್ ರಾಜಕುಮಾರ್ ಬಿಎಂಟಿಸಿ ರಾಯಭಾರಿಯಾಗಿದ್ದರು. 2019ರ ಡಿಸೆಂಬರ್ನಲ್ಲಿ ಬಿಎಂಟಿಸಿ ಹಾಗೂ ಬಸ್ ಪ್ರಿಯಾರಿಟಿ ಲೈನ್ ರಾಯಭಾರಿಯಾಗಲು ಒಪ್ಪಿಕೊಂಡಿದ್ದರು.
ಮೈಮುಲ್ ರಜೆ
ಕರ್ನಾಟಕ ಹಾಲು ಉತ್ಪಾದಕರ ಪರವಾಗಿ ಕೆಎಂಎಫ್ ಜಾಹೀರಾತಿನಲ್ಲಿ ಪುನೀತ್ ರಾಜಕುಮಾರ್ ಕಾಣಿಸಿಕೊಂಡಿದ್ದರು. ಉಚಿತವಾಗಿ ಜಾಹೀರಾತಿನಲ್ಲಿ ಕಾಣಿಸಿಕೊಂಡು ಕೆಎಂಎಫ್ ಉತ್ಪನ್ನಗಳಿಗೆ ಪ್ರಚಾರ ನೀಡಿ ಹಾಲು ಒಕ್ಕೂಟದ ರಾಯಭಾರಿಯಾಗಿ ರೈತಾಪಿ ಸಮೂಹದ ಮೆಚ್ಚುಗೆ ಗಳಿಸಿದ್ದರು.
ಇದೀಗ ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ನಾಳೆ ಒಂದು ದಿನ ಮೈಮುಲ್ಗೆ ರಜೆ ಘೋಸಿಸಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಶಿಕ್ಷಣವೇ ಶಕ್ತಿ ಎನ್ನುವ ಜಾಹೀರಾತಿನಲ್ಲಿ ಪುನೀತ್ ಅಭಿನಯಿಸಿದ್ದರು.
ಶಾಲೆ ಬೆಲ್ ಹೊಡೆಯುವುದು, ಶಾಲೆಗೆ ಬನ್ನಿ ಎನ್ನುವುದು ಹಾಗೂ ಕೊಠಡಿಯಲ್ಲಿ ಕುಳಿತು ವಿದ್ಯೆ ಕಲಿಯಿರಿ ಎಂಬ ದೃಶ್ಯದಲ್ಲಿ ಪಾಲ್ಗೊಂಡು ಶಿಕ್ಷಣ ಇಲಾಖೆ ರಾಯಭಾರಿಯಾಗಿ ಕಾಣಿಸಿಕೊಂಡಿದ್ದರು.
ಚುನಾವಣೆ ರಾಯಭಾರಿ
ನಾನು ವೋಟ್ ಮಾಡುತ್ತೇನೆ, ನೀವು ತಪ್ಪದೆ ವೋಟ್ ಮಾಡಿ ಎಂದು ಜಾಹೀರಾತಿನಲ್ಲಿ ಕಾಣಿಸಿಕೊಂಡು ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನನ್ನೂ ಪುನೀತ್ ಮಾಡಿದ್ದರು.
2013ರ ವಿಧಾನಸಭಾ ಚುನಾವಣೆ ವೇಳೆ ಮತದಾರರನ್ನು ಮತಗಟ್ಟೆಗೆ ಆಕರ್ಷಿಸುವ ಸಲುವಾಗಿ ಚುನಾವಣಾ ಆಯೋಗ ಮೂವರು ಸಿನಿ ರಾಯಭಾರಿಗಳನ್ನು ಆಯ್ಕೆ ಮಾಡಿಕೊಂಡಿತ್ತು. ಅದರಲ್ಲಿ ಪುನೀತ್ ರಾಜಕುಮಾರ್ ಕೂಡ ಒಬ್ಬರಾಗಿದ್ದರು.
ಇದನ್ನೂ ಓದಿ: 'ಯುವರತ್ನ' ಸ್ಪೇನ್ ಚಿತ್ರೀಕರಣ ಕ್ಯಾನ್ಸಲ್ ಆಗಲು ಪುನೀತ್ಗೆ ಇದ್ದ ಆ ಅಭ್ಯಾಸವೇ ಕಾರಣವಂತೆ..