ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ 2019-20ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ, ಅನುಪಾತದ ಬದಲು ಇನ್ಮುಂದೆ ಮೆರಿಟ್ ಆಧಾರದ ಮೇಲೆ ದಾಖಲಾತಿಗೆ ಅವಕಾಶ ಕಲ್ಪಿಸಿದೆ.
![Department of Pre-University Education](https://etvbharatimages.akamaized.net/etvbharat/prod-images/3346378_336_3346378_1558457021904.png)
ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಪಿಯುಸಿ ತರಗತಿಗಳಿಗೆ ದಾಖಲಾತಿ ನೀಡುವ ಸಂದರ್ಭದಲ್ಲಿ ಅನುಸರಿಸಲು ತಿಳಿಸಿರುವ SEAT-MATRIX ನಿಯಮಗಳಲ್ಲಿ ಗಂಡು ಮಕ್ಕಳಿಗೆ ಶೇ.50% ಹಾಗೂ ಹೆಣ್ಣು ಮಕ್ಕಳಿಗೆ ಶೇ.50%ರ ಅನುಪಾತದಲ್ಲಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿತ್ತು.
ಆದರೆ, ಮುಂದಿನ ದಿನಗಳಲ್ಲಿ ದಾಖಲಾತಿ ನೀಡುವಾಗ ಶೇಕಡಾ 50-50 ರ ಗಂಡು-ಹೆಣ್ಣು ಅನುಪಾತದ ಕ್ರಮವನ್ನು ಬಿಟ್ಟು, ವಿದ್ಯಾರ್ಥಿಗಳು ಗಳಿಸಿರುವ ಅಂಕಗಳ ಜೇಷ್ಠತೆಯ ಆಧಾರದ ಮೇರೆಗೆ ವರ್ಗಾವಾರು ವಿಂಗಡನೆಯನ್ನು ಅನುಸರಿಸಿ ದಾಖಲಾತಿ ನೀಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪಿಯು ತರಗತಿ ಪ್ರವೇಶಾತಿ ನಿಯಮ ಬದಲು, ಈವರೆಗೂ ಅನುಸರಿಸುತ್ತಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶೇ.50 ರ ಅನುಪಾತದ ನಿಯಮ ಬದಲು, ಮೆರಿಟ್ ಆಧಾರದಲ್ಲಿ ಪ್ರವೇಶ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ. ಇನ್ನುಳಿದಂತೆ, ವರ್ಗವಾರು ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಸದ್ಯ ತಿದ್ದುಪಡಿಯನ್ನು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ಕಡ್ಡಾಯವಾಗಿ ಅನುಸರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ.