ಬೆಂಗಳೂರು: ಈಗಾಗಲೇ ಲೋಕೋಪಯೋಗಿ ಇಲಾಖೆ ಅನುದಾನ ಇಲ್ಲದೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಅನುದಾನದ ಕೊರತೆ ಮಧ್ಯೆ ಕಳೆದ ಮೂರು ವರ್ಷದಿಂದ ಅತಿವೃಷ್ಟಿಗೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳು ಕೊಚ್ಚಿ ಹೋಗುತ್ತಿವೆ. ಇದರ ದುರಸ್ತಿಗೆಂದು ಕೋಟಿ ಕೋಟಿ ಹಣ ವ್ಯಯಿಸಬೇಕಾದ ಅನಿವಾರ್ಯತೆಯೂ ಇದೆ. ಇದರ ನಡುವೆ ಈ ಬಾರಿ ಸುರಿದ ಆರಂಭಿಕ ಮಳೆಯಿಂದ ಭಾರೀ ಪ್ರಮಾಣದ ರಸ್ತೆಗಳಿಗೆ ಹಾನಿಯಾಗಿದ್ದು, ಇಲಾಖೆಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಕೋವಿಡ್- ಲಾಕ್ಡೌನ್ನಿಂದ ರಾಜ್ಯದ ಬೊಕ್ಕಸವಂತೂ ಖಾಲಿಯಾಗಿವೆ. ಕೋವಿಡ್ ನಿರ್ವಹಣೆ ಮತ್ತು ಲಾಕ್ಡೌನ್ನಿಂದ ಉಂಟಾಗಿರುವ ಆರ್ಥಿಕ ಬರೆಯಿಂದ ಬಹುತೇಕ ಇಲಾಖೆಗಳ ಅನುದಾನವನ್ನು ಸರ್ಕಾರ ಕಡಿತಗೊಳಿಸಿದೆ. ಈ ಮಧ್ಯೆ ವರ್ಷಂಪ್ರತಿ ಎದುರಾಗುತ್ತಿರುವ ಅತಿವೃಷ್ಟಿ ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅದರಲ್ಲೂ ಲೋಕೋಪಯೋಗಿ ಇಲಾಖೆ ಈ ಅತಿವೃಷ್ಟಿಯ ವಿಕೋಪಕ್ಕೆ ಅತಿಯಾಗಿ ಪ್ರಭಾವಕ್ಕೊಳಗಾಗಿರುವ ಇಲಾಖೆ. ಈಗಾಗಲೇ ಅನುದಾನದ ಕೊರತೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಗೆ ಮಳೆಯಿಂದ ಹಾನಿಗೊಳಗಾದ ರಸ್ತೆ ದುರಸ್ತಿ ಕಾರ್ಯವೇ ಕಬ್ಬಿಣದ ಕಡಲೆಯಾಗಿದೆ. ಈ ಬಾರಿ ಜುಲೈ ತಿಂಗಳಲ್ಲಿ ಸುರಿದ ಮೂರು ದಿನಗಳ ಮಳೆಗೆ ಇಲಾಖೆ ಭಾರಿ ನಷ್ಟ ಅನುಭವಿಸಿದ್ದು ಇಲಾಖೆ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.
ಮೂರು ದಿನದ ಮಳೆಗೆ ಅಪಾರ ಹಾನಿ: ಕಳೆದ ತಿಂಗಳು ಸುರಿದ ಮೂರು ದಿನದ ಮಳೆಗೆ ಲೋಕೋಪಯೋಗಿ ಇಲಾಖೆ ಅಪಾರ ಹಾನಿ ಅನುಭವಿಸಿದೆ. ಆರಂಭಿಕ ಮಳೆಗೆ ಭಾರೀ ನಷ್ಟ ಅನುಭವಿಸಿದ ಲೋಕೋಪಯೋಗಿ ಇಲಾಖೆ, ಕಳೆದೆರಡು ವರ್ಷದಂತೆ ಈ ಬಾರಿಯೂ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ವರುಣ ಆರ್ಭಟಿಸಿದರೆ, ನಷ್ಟದ ಪ್ರಮಾಣ ಗಣನೀಯ ಏರಿಕೆಯಾಗುವ ಆತಂಕ ಇಲಾಖೆ ಅಧಿಕಾರಿಗಳಿದೆ.
ನಷ್ಟದ ಲೆಕ್ಕ: ಲೋಕೋಪಯೋಗಿ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ, ಕಳೆದ ತಿಂಗಳು ಸುರಿದ ಮಳೆಗೆ ಲೋಕೋಪಯೋಗಿ ಇಲಾಖೆ ಸುಮಾರು 2,429.14 ಕೋಟಿ ರೂ. ನಷ್ಟ ಅನುಭವಿಸಿದೆ. ಒಟ್ಟು 1330.16 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾನಿಯಾಗಿದ್ದರೆ, 2728.17 ಕಿ.ಮೀ. ಉದ್ದದ ಪ್ರಮುಖ ಜಿಲ್ಲಾ ರಸ್ತೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಆ ಮೂಲಕ ಒಟ್ಟು 1873.74 ಕೋಟಿ ಮೌಲ್ಯದ ರಸ್ತೆಗಳು ಹಾನಿಯಾಗಿವೆ. ಸುಮಾರು 921 ಸೇತುವೆಗಳು ಹಾನಿಯಾಗಿದ್ದು, 424 ಕೋಟಿ ರೂ. ನಷ್ಟ ಆಗಿದೆ. ಇನ್ನು 10.35 ಕೋಟಿ ರೂ. ಮೌಲ್ಯದ ಕಟ್ಟಡಗಳು ನಷ್ಟ ಆಗಿದೆ. 121 ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಹಾಗೂ ಸೇತುವೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಒಟ್ಟು 2429.14 ಕೋಟಿ ರೂ. ಮೌಲ್ಯದ ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆ, ಕಟ್ಟಡಗಳು ಹಾನಿಯಾಗಿದ್ದು, ಇಲಾಖೆ ತುರ್ತು ದುರಸ್ತಿಗಾಗಿ ಮೊದಲಿಗೆ 348.24 ಕೋಟಿ ರೂ.ನ ಬೇಡಿಕೆ ಇಟ್ಟಿದೆ. ಈ ಪೈಕಿ ಸರ್ಕಾರ 300 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಪೂರ್ಣ ದುರಸ್ತಿಗೆ ಅನುದಾನದ ಕೊರತೆ: ಕಳೆದ ಮೂರು ವರ್ಷದಿಂದ ನಿರಂತರವಾಗಿ ಮಳೆಯ ಅಬ್ಬರಕ್ಕೆ ಲೋಕೋಪಯೋಗಿ ಇಲಾಖೆ ಅಪಾರ ಹಾನಿ ಅನುಭವಿಸುತ್ತಿದ್ದು, ದುರಸ್ತಿ ಕಾರ್ಯಕ್ಕೆ ಅನುದಾನದ ಕೊರತೆ ಎದುರಾಗುತ್ತಿದೆ. ಅದರಲ್ಲೂ ಕೋವಿಡ್-ಲಾಕ್ಡೌನ್ನಿಂದ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಇಲಾಖೆಗೆ ಕೊಡ ಮಾಡುವ ಅನುದಾನದಲ್ಲೂ ಕಡಿತ ಮಾಡಲಾಗಿದೆ. ತೀವ್ರ ಅನುದಾನದ ಕೊರತೆ ಎದುರಿಸುತ್ತಿರುವ ಇಲಾಖೆಗೆ ಅತಿವೃಷ್ಟಿಯಿಂದ ಹಾನಿಯಾದ ರಸ್ತೆ, ಸೇತುವೆಗಳ ದುರಸ್ತಿ ಕಾರ್ಯವೇ ದುಸ್ತರವಾಗಿ ಪರಿಣಮಿಸಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿ ಬಾರಿ ಪ್ರವಾಹದಿಂದ ಅತಿ ಹೆಚ್ಚು ನಷ್ಟ ಅನುಭವಿಸುತ್ತಿರುವುದು ಲೋಕೋಪಯೋಗಿ ಇಲಾಖೆ. ಇಲಾಖೆ ಅನುದಾನದ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯವನ್ನು ಮಾಡಲು ಕಷ್ಟ ಸಾಧ್ಯವಾಗುತ್ತಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಿಗೆ ಕಾಮಗಾರಿಗಳ ಬಾಕಿ ಬಿಲ್ ಮೊತ್ತ ಸುಮಾರು 4,000 ಕೋಟಿ ರೂ.ಗೆ ಏರಿಕೆಯಾಗಿದೆ. ಅಳೆದು ತೂಗಿ, ಇತಿ ಮಿತಿಯಲ್ಲಿ ಹಣ ಹೊಂದಿಸಿ ದುರಸ್ತಿ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 3 ವರ್ಷದಲ್ಲಿ ಇಲಾಖೆ ನೆರೆ ನಷ್ಟ ಏನು?: ಲೋಕೋಪಯೋಗಿ ಇಲಾಖೆ ಕಳೆದ ಮೂರು ವರ್ಷದಿಂದ ಪ್ರವಾಹ, ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸುತ್ತಿದೆ. ಲೋಕೋಪಯೋಗಿ ಇಲಾಖೆ ಅನುಭವಿಸಿದ ನಷ್ಟದ ಪ್ರಮಾಣವನ್ನು ನೋಡಿದರೆ ಇಲಾಖೆ ಮೇಲಾಗುತ್ತಿರುವ ಹೊರೆ ಏನು ಎಂಬುದು ಗೊತ್ತಾಗುತ್ತದೆ.
2018-19ರಲ್ಲಿ ಸುರಿದ ಭಾರಿ ಮಳೆಗೆ ಲೋಕೋಪಯೋಗಿ ಇಲಾಖೆ ಬರೋಬ್ಬರಿ 2078.88 ಕೋಟಿ ರೂ.ನಷ್ಟ ಅನುಭವಿಸಿತ್ತು. 2019-20ರಲ್ಲಿ ಬಿದ್ದ ಮಳೆಯಿಂದಾಗಿ ಇಲಾಖೆಗೆ ಸೇರಿದ ಸುಮಾರು 7,000 ಕೋಟಿ ರೂ. ಮೌಲ್ಯದ ರಸ್ತೆ, ಸೇತುವೆ, ಕಟ್ಟಡಗಳು ಹಾನಿಗೊಳಗಾಗಿತ್ತು. 2020-21ರಲ್ಲಿ ಮತ್ತೆ ರಾಜ್ಯ ಭಾರಿ ಪ್ರವಾಹಕ್ಕೆ ತುತ್ತಾಯಿತು. ಇದರಿಂದ ಇಲಾಖೆಗೆ ಬರೋಬ್ಬರಿ 3,500 ಕೋಟಿ ರೂ. ಮೌಲ್ಯದ ರಸ್ತೆ, ಸೇತುವೆ, ಕಟ್ಟಡಗಳು ಕೊಚ್ಚಿ ಹೋಗಿತ್ತು. ಈ ವರ್ಷ ಜುಲೈನಲ್ಲಿ ಸುರಿದ ಮಳೆಗೆ ಲೋಕೋಪಯೋಗಿ ಇಲಾಖೆ ಸುಮಾರು 2,429.14 ಕೋಟಿ ರೂ. ನಷ್ಟ ಅನುಭವಿಸಿದೆ. ಮುಂಬರುವ ಮಳೆಗೆ ಈ ನಷ್ಟದ ಪ್ರಮಾಣ ಮತ್ತೆ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.