ಬೆಂಗಳೂರು: ಕೇಂದ್ರ ಸರ್ಕಾರ ಮಾರಕ ಪಬ್ಜಿ ಮೊಬೈಲ್ ಗೇಮ್ ಬ್ಯಾನ್ ಮಾಡಿದೆ. ಆಟದ ವ್ಯಸನಿಗಳಿಗೆ ಬ್ಯಾನ್ ಬಳಿಕ ಮಾನಸಿಕ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯಸನಿಗಳಿಗೆ ಮಾನಸಿಕ ಸಮಸ್ಯೆ ಉಂಟಾದರೆ ಏನು ಮಾಡಬೇಕು ಎಂದು ನಗರದಲ್ಲಿ ಮೂರು ದಶಕಗಳಿಂದ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ಜಗದೀಶ್ ಈಟಿವಿ ಭಾರತ್ ಮೂಲಕ ಸಲಹೆ ನೀಡಿದ್ದಾರೆ.
ಪಬ್ಜಿ ಆಟ ದೇಶದಲ್ಲಿ ಬ್ಯಾನ್ ಆಗಿರುವುದು ಸ್ವಾಗತಾರ್ಹ ವಿಷಯ. ಇದರಿಂದ ಲಕ್ಷಾಂತರ ಮಕ್ಕಳಿಗೆ ಹಾಗೂ ಪೋಷಕರ ಉತ್ತಮ ಭವಿಷ್ಯಕ್ಕೆ ದಾರಿಯಾಗಲಿದೆ. ಈ ಸಂದರ್ಭದಲ್ಲಿ ಮಕ್ಕಳನ್ನು ವ್ಯಸನಮುಕ್ತ ಮಾಡಬೇಕು ಹಾಗೂ ಅವರ ಜೀವನ ಮತ್ತೆ ಪ್ರಾರಂಭಿಸಬೇಕು ಎಂದು ಡಾ. ಜಗದೀಶ್ ಹೇಳಿದರು.
ಬ್ಯಾನ್ ಬಳಿಕ ವ್ಯಸನಮುಕ್ತರಾಗಲು ವೈದ್ಯರು ನೀಡಿರುವ ಸಲಹೆ:
- ಪ್ರತಿನಿತ್ಯ ವ್ಯಾಯಾಮ
- ಪೌಷ್ಟಿಕ ಆಹಾರ ಸೇವನೆ
- ನಿಯಮಿತ ನಿದ್ರೆ
- ಪೋಷಕರು ಹಾಗೂ ಕುಟುಂಬದ ಜೊತೆ ಕಾಲಕಳೆಯುವುದು
- ಸಾಮಾಜಿಕ ಸಂವಹನ ಹೆಚ್ಚಿಸಿಕೊಳ್ಳಬೇಕು
ಕೆಲ ವ್ಯಸನಿಗಳಿಗೆ ಸುಲಭವಾಗಿ ಈ ವ್ಯಸನದಿಂದ ಮುಕ್ತವಾಗಲು ಕಷ್ಟವಾಗಬಹುದು. ಪ್ರತಿನಿತ್ಯ ಪಬ್ಜಿ ಆಡಬೇಕು ಎಂದು ಚಡಪಡಿಸಬಹುದು. ಇಂತಹ ಸಂದರ್ಭದಲ್ಲಿ ಮನೋತಜ್ಞ ಅಥವಾ ವೈದ್ಯರ ಬಳಿ ಸಲಹೆ ಪಡೆಯಬೇಕು. ಜತೆಗೆ ಪೋಷಕರು ಮಕ್ಕಳ ಮೇಲೆ ಸಹಾನುಭೂತಿ ತೋರಿಸಬೇಕು ಎಂದು ಡಾ. ಜಗದೀಶ್ ಹೇಳಿದರು.
ವಿಶ್ವದಲ್ಲಿ ನಲವತ್ತು ಕೋಟಿಗೂ ಅಧಿಕ ಮಂದಿ ಈ ಮಾರಕ ಆಟದ ವ್ಯಸನಿಗಳಾಗಿದ್ದಾರೆ. ಭಾರತ ಈ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. 2018ರ ವರದಿಯ ಪ್ರಕಾರ ಭಾರತದಲ್ಲಿ 40 ಲಕ್ಷಕ್ಕೂ ಅಧಿಕ ಜನ ಈ ಚಟಕ್ಕೆ ಬಿದ್ದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ, ಪಬ್ಜಿ ವ್ಯಸನ ಮಾನಸಿಕ ಸಮಸ್ಯೆ ಎಂದು ಪರಿಗಣಿಸಿದೆ.
ಪೋಷಕರು ಮಕ್ಕಳನ್ನು ಪಬ್ಜಿ ಆಟದಿಂದ ದೂರವಿಡಬೇಕು. ಇನ್ನು ಈ ಆಟ ನಡೆದ ಸಂದರ್ಭದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸಿವೆ. ತಡವಾದರೂ ಕೇಂದ್ರ ಸರ್ಕಾರ ಪಬ್ಜಿ ಆಟ ಸೇರಿ 118 ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಈಗ ಜನರು ತಮ್ಮನ್ನು ಆರೋಗ್ಯಕರವಾದ ಮನರಂಜನಾ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಒಟ್ಟಾರೆಯಾಗಿ ವ್ಯಸನದಿಂದ ಹೊರಬರಲು ಹಾಗೂ ಜೀವನವನ್ನು ಪುನರಾರಂಭಿಸಲು ಇದು ಸೂಕ್ತ ಸಮಯವಾಗಿದೆ.