ಬೆಂಗಳೂರು: ಕೊರೊನಾ ಸೋಂಕಿನಿಂದ ಸಕಾಲಕ್ಕೆ ಆರಂಭವಾಗ ಬೇಕಿದ್ದ ಶೈಕ್ಷಣಿಕ ವರ್ಷ ಮುಂದೂಡಲ್ಪಟ್ಟಿತ್ತು. ಈಗ ಪದವಿ ಪೂರ್ವ ಶಿಕ್ಷಣ ಮಂಡಳಿಯು 2020-21ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಗಳನ್ನು ಆರಂಭಿಸುವ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ಸಿ ಫಲಿತಾಂಶವನ್ನು ಈಗಾಗಲೇ ಪ್ರಕಟಿಸಿದ್ದು, ಪ್ರಥಮ ಪಿಯುಸಿ ತರಗತಿಗಳಿಗೆ ದಾಖಲಾತಿ ಪ್ರಕ್ರಿಯೆಯನ್ನು ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳು ನಾಳೆಯಿಂದ(ಆಗಸ್ಟ್ 13)ಆರಂಭಿಸಲು ಸೂಚಿಸಿದೆ.
ಆನ್ಲೈನ್ನಲ್ಲಿ ಪ್ರವೇಶ: ಕೋವಿಡ್-19 ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸೌಲಭ್ಯಗಳಿದ್ದಲ್ಲಿ, ಅವುಗಳನ್ನು ಸ್ವೀಕರಿಸಿ, ದಾಖಲಾತಿ ಮಾಡಿಕೊಳ್ಳಲು ಸೂಚಿಸಿದೆ. ಆನ್‌ಲೈನ್ ವ್ಯವಸ್ಥೆಗಳು ಇಲ್ಲದ ಪದವಿ ಪೂರ್ವ ಕಾಲೇಜುಗಳು ನೇರವಾಗಿ ದಾಖಲಾತಿ ಅರ್ಜಿಗಳನ್ನು ವಿದ್ಯಾರ್ಥಿಗಳಿಗೆ ಪೋಷಕರಿಗೆ ವಿತರಿಸುವ ವ್ಯವಸ್ಥೆಯನ್ನುಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸಾಮಾಜಿಕ ಅಂತರವನ್ನುಕಾಪಾಡಿಕೊಳ್ಳುವುದು, ಮುಖಗವಸುಗಳನ್ನು ಧರಿಸುವುದು ಹಾಗೂ ಕೈಗಳಿಗೆ ಸ್ಯಾನಿಟೈಜರ್ ಬಳಸುವುದು ಕಡ್ಡಾಯ. ಯಾವುದೇ ಕಾರಣಕ್ಕೆ ಕಾಲೇಜು ಮತ್ತು ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಗುಂಪು, ಗುಂಪಾಗಿ ಸೇರುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ತಿಳಿಸಲಾಗಿದೆ.
ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳನ್ನು ದಾಖಲಾತಿ ತಂಡಗಳನ್ನಾಗಿ, ಸಮಯ ನಿಗದಿಪಡಿಸಿ ಪ್ರಕ್ರಿಯೆಯನ್ನು ನಿರ್ವಹಿಸಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಇದರ ಜವಾಬ್ದಾರಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಆಯಾ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳದ್ದು ಎಂದು ಆದೇಶಿಸಿದೆ.
ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ: ಇನ್ನು ತರಗತಿಗಳನ್ನು ಆರಂಭಿಸಲು ದಿನಾಂಕವನ್ನು ಹಾಗೂ ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ. 2020-21ನೇ ಸಾಲಿನ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ಯಾವುದೇ ಶುಲ್ಕಗಳನ್ನು ಹೆಚ್ಚಿಸದಿರಲು ಸೂಚಿಸಿದೆ. ಕಾಲೇಜು ಆಡಳಿತ ಮಂಡಳಿಯವರು ಕಳೆದ ಸಾಲಿನಲ್ಲಿ ಪಡೆದ ಶುಲ್ಕಕ್ಕಿಂತ ಕಡಿಮೆ ಶುಲ್ಕವನ್ನು ಪಡೆಯಲು ಇಚ್ಚಿಸಿದಲ್ಲಿ ಸಂಸ್ಥೆಯವರು ಸ್ವತಂತ್ರರಾಗಿರುತ್ತಾರೆ. ಉಳಿದೆಲ್ಲಾ ಶುಲ್ಕಗಳನ್ನು 2019-20ನೇ ಸಾಲಿನ ಶೈಕ್ಷಣಿಕ ಮತ್ತು ದಾಖಲಾತಿ ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ ಪಡೆಯಲು ಸೂಚಿಸಿದೆ. ಯಾವುದೇ ಗೊಂದಲಗಳು ಉಂಟಾಗದಂತೆ ಸದರಿ ಕಾರ್ಯಗಳನ್ನು ನಿರ್ವಹಿಸಲು ಈ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಹಾಗೂ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಿದೆ.