ಬೆಂಗಳೂರು : ಪಿಎಸ್ಐ ಅಕ್ರಮ ನೇಮಕ ಪ್ರಕರಣದಲ್ಲಿ ಬಂಧಿತನಾಗಿರುವ ಹೆಡ್ ಕಾನ್ಸ್ಸ್ಟೇಬಲ್ ಶ್ರೀಧರ್ ಕಡೆಯಿಂದ ಮತ್ತೆ 50 ಲಕ್ಷ ರೂ. ವಶಪಡಿಸಿಕೊಂಡಿರುವ ಸಿಐಡಿ ಈ ಮೂಲಕ ಒಟ್ಟು 2.20 ಕೋಟಿ ರೂಪಾಯಿ ಜಪ್ತಿ ಮಾಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕಳೆದ ಮಂಗಳವಾರ ಶ್ರೀಧರ್ ಮನೆಯಲ್ಲಿ 1.55 ಕೋಟಿ ಜಪ್ತಿ ಮಾಡಿಕೊಂಡಿದ್ದ ಸಿಐಡಿ ಪೊಲೀಸರು ಇದೀಗ ಒಟ್ಟು 2.20 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ.
ಬಂಧಿತನಾಗಿರುವ ಡಿವೈಎಸ್ಪಿ ಶಾಂತಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶ್ರೀಧರ್, ಅಭ್ಯರ್ಥಿಗಳಿಂದ ಹಣ ಪಡೆದಿದ್ದ ಎನ್ನಲಾಗಿದೆ. ಅಲ್ಲದೇ ಮಧ್ಯವರ್ತಿಗಳಿಗೆ ಹಾಗೂ ಸ್ನೇಹಿತರಿಗೆ ಅಕ್ರಮದಿಂದ ಬಂದಿದ್ದ ಇದೇ ಹಣವನ್ನು ಹಂಚಿದ್ದರು ಎನ್ನಲಾಗುತ್ತಿದೆ. ಈ ಮಾಹಿತಿ ಮೇರೆಗೆ ಮತ್ತೆ 50 ಲಕ್ಷ ಹಣ ಜಪ್ತಿ ಮಾಡಿಕೊಂಡು ಸಿಐಡಿ ತನಿಖಾಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ಪಿಎಸ್ಐ ಅಕ್ರಮದ ಅಂಗಳಕ್ಕೆ ಇಡಿ, ಎಸಿಬಿ?: ಪಿಎಸ್ಐ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವುದು ಮೇಲ್ನೊಟಕ್ಕೆ ಸಾಬೀತಾಗಿದೆ. ಅಕ್ರಮದಲ್ಲಿ ಹಣದ ಹೊಳೆ ಹರಿದಿದೆ ಎನ್ನಲಾಗುತ್ತಿದೆ. ಜಾರಿ ನಿರ್ದೇಶಾನಾಲಯ (ಇಡಿ) ಹಾಗೂ ಎಸಿಬಿ ಎಂಟ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ.
ಇದಲ್ಲದೇ ಸರ್ಕಾರಿ ನೌಕರರು ಭ್ರಷ್ಟಾಚಾರ ಎಸಗಿದ ಆರೋಪದಡಿ ಎಸಿಬಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ. ಸದ್ಯ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಇಡಿ ಹಾಗೂ ಎಸಿಬಿಯು ಸಿಐಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.