ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪ್ರಕರಣದ ಆರೋಪಿಗಳಾದ ಎಸ್.ಜಾಗೃತ್ ಹಾಗೂ ರಚನಾ ಹೈಕೋರ್ಟ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇವರ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಮೇ 19ಕ್ಕೆ ವಿಚಾರಣೆ ನಿಗದಿ ಮಾಡಿದೆ.
ತಾವು ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಎಸಗಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಇತ್ತು. ಅಲ್ಲದೇ, ಪರೀಕ್ಷಾ ಕೇಂದ್ರದ ಮೇಲೆ ಮೇಲ್ವಿಚಾರಕರಲ್ಲದೇ ವಿಚಕ್ಷಣಾ ಸ್ಕ್ವಾಡ್ ಅಧಿಕಾರಿಗಳೂ ನಿಗಾ ಇಟ್ಟಿದ್ದರು. ಪರೀಕ್ಷೆ ನಡೆದು ವರ್ಷದ ಮೇಲಾಗಿದ್ದು, ಫಲಿತಾಂಶ ಪ್ರಕಟಗೊಂಡ ನಂತರ ಎಫ್‌ಐಆರ್ ದಾಖಲಿಸಿರುವುದು ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನು ದೂರು ದಾಖಲಿಸಿರುವ ಸಿಐಡಿ ಅಧಿಕಾರಿ ನರಸಿಂಹ ಮೂರ್ತಿ ಅವರು ತನಿಖಾ ತಂಡದಲ್ಲಿದ್ದಾರೆ. ಈವರೆಗಿನ ಸಿಐಡಿ ತನಿಖೆಯಲ್ಲಿ ನಾವು ಅಕ್ರಮದಲ್ಲಿ ಭಾಗಿಯಾಗಿರುವ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ನಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅಲ್ಲದೇ, ಈ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥ ಮಾಡುವವರೆಗೂ ಪ್ರಕರಣ ಕುರಿತಂತೆ ಪೊಲೀಸರ ತನಿಖೆಗೆ ತಡೆಯಾಜ್ಞೆ ನೀಡಬೇಕೆಂದೂ ಮನವಿ ಮಾಡಿದ್ದಾರೆ.
ಇದನ್ನೂಓದಿ: ಪಿಎಸ್ಐ ಪರೀಕ್ಷಾ ಅಕ್ರಮ.. ಡಿವೈಎಸ್ಪಿ ಸಾಲಿ, ಸಿಪಿಐ ಮೇತ್ರೆ ಬಂಧನ