ನೆಲಮಂಗಲ/ಆನೇಕಲ್: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ನೆಲಮಂಗಲ ಮತ್ತು ಆನೇಕಲ್ನಲ್ಲಿಯೂ ಪ್ರತಿಭಟನೆ ನಡೆಯಿತು.
ನೆಲಮಂಗಲ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸಂತ್ರಸ್ತೆಗೆ ಮೊಂಬತ್ತಿ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಆತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿರುವ ಯುವತಿಯ ಕುಟುಂಬಕ್ಕೆ ನ್ಯಾಯ ಕೊಡಿಸಿ ಪರಿಹಾರ ಕೊಡುವಂತೆ ಕರವೇ ಕಾರ್ಯಕರ್ತರಿಂದ ಉತ್ತರಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಘಟನೆ ಖಂಡಿಸಿ ದೊಡ್ಡಬಳ್ಳಾಪುರ ನಗರದ ಡಾ. ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು. ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ, ಕಳೆದ ವರ್ಷ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ಶಾಸಕ ಮತ್ತು ಆತನ ಸಹೋದರ ಭಾಗವಹಿಸಿದ್ದು ಸಂತ್ರಸ್ತೆಯ ಕುಟುಂಬದವರು ಸೇರಿದಂತೆ ಆಕೆಯ ಪರ ವಕೀಲರನ್ನು ಸಹ ಕೊಲೆ ಮಾಡಲಾಗಿದೆ ಎಂದರೆ ಸಂತ್ರಸ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು. ಯುಪಿಯಲ್ಲಿ ಕಳೆದ 24 ಗಂಟೆಗಳಲ್ಲಿ 17 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಉತ್ತರಪ್ರದೇಶ ಗೂಂಡಾ ರಾಜ್ಯವಾಗಿ ಮಾರ್ಪಟ್ಟಿದೆ. ಹಾಗಾಗಿ ಸೂಕ್ತ ತನಿಖೆ ನಡೆಸಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಹ ಪ್ರತಿಭಟನೆ ಮಾಡಲಾಯಿತು. ತಾಲೂಕು ಕಚೇರಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಉತ್ತರಪ್ರದೇಶದ ಯೋಗಿ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಹಾಗೂ ಎಸ್ಎಫ್ಐ ಕಾರ್ಯಕರ್ತರು ಆನೇಕಲ್ ಪಟ್ಟಣದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಜನವಾದಿ ಮಹಿಳಾ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ ಅರ್ಚನಾ ಮಾತನಾಡಿ, ಹೆಣ್ಣು ಮಕ್ಕಳು ನಿರ್ಭೀತಿಯಾಗಿ ಓಡಾಡಲು ಕಷ್ಟವಾಗಿದೆ. ಏಕೆಂದರೆ ದೇಶದಾದ್ಯಂತ ಆನೇಕ ಕಡೆ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ, ಹಲ್ಲೆ ಪ್ರಕರಣಗಳು ನಿರಂತವಾಗಿ ನಡೆದರೂ ಕೂಡ ಆಳುವ ಸರ್ಕಾರಗಳು ಮಾತ್ರ ಮಹಿಳೆಯರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗುತ್ತಿವೆ ಎಂದರು. ಅಕ್ಟೋಬರ್ 2ರಂದು ಗಾಂಧಿ ಜಯಂತಿ. ಆದ್ರೆ ಗಾಂಧಿ ಪ್ರತಿಮೆ ಬಳಿ ಮಹಿಳೆಯರು ಬಂದು ನಮಗೆ ರಕ್ಷಣೆ ನೀಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರೆ ಮಹಿಳೆಯರಿಗೆ ಎಷ್ಟು ಸ್ವಾತಂತ್ರ್ಯವಿದೆ ಎಂಬುದು ತಿಳಿಯುತ್ತದೆ ಎಂದರು. ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕು ಎಂದು ಅಗ್ರಹಿಸಿದರು.