ಬೆಂಗಳೂರು: ದೆಹಲಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಾಳೆ ರಾಜ್ಯ ರೈತರ ಸಂಯುಕ್ತ ಹೋರಾಟ ಸಮಿತಿಯಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ತಡೆಗೆ ಮುಂದಾಗಿದ್ದಾರೆ. ಇದಕ್ಕೆ ರೈತರು, ಕಾರ್ಮಿಕರು ಹಾಗೂ ದಲಿತ ಸಂಘಟನೆಗಳ ಬೆಂಬಲದೊಂದಿಗೆ ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿ ಬಂದ್ಗೆ ಕರೆ ನೀಡಲಾಗಿದೆ.
ಈಗಾಗಲೇ ರಾಜ್ಯದಿಂದ ದೆಹಲಿಗೆ 500ಕ್ಕೂ ಹೆಚ್ಚು ರೈತರು ತೆರಳಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯದ ರೈತರು ದೆಹಲಿ ತಲುಪಿದ್ದಾರೆ. ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರು-ದೊಡ್ಡಬಳ್ಳಾಪುರದ ರಾಜ್ಯ ಹೆದ್ದಾರಿ ತಡೆಯಲಿದ್ದಾರೆ. ರೈತ ಮುಖಂಡ, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬೆಂಗಳೂರು - ಮೈಸೂರು ರೋಡ್ ತಡೆ ನಡೆಸಿ, ಬಿಡದಿ ಮತ್ತು ಮಂಡ್ಯ ಬಳಿ ರಸ್ತೆ ತಡೆ ನಡೆಸಲಿದ್ದಾರೆ. ಚಾಮರಸ ಮಾಲೀ ಪಾಟೀಲ್, ರಾಯಚೂರು ಅಸ್ಕಿಹಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಿದ್ದಾರೆ.
ಜೊತೆಗೆ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ನಾಳೆ ಬೆಂಗಳೂರು ದೇವನಹಳ್ಳಿ ರಾಣಿ ವೃತ್ತದಲ್ಲಿ ಮಧ್ಯಾಹ್ನ 12ರಿಂದ 3 ಗಂಟೆವರೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಲಿದೆ. ಇದಕ್ಕೆ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಲು ಕರ್ನಾಟಕ ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಕೂಡ ತೀರ್ಮಾನಿಸಿದೆ. ಬೆಳಗ್ಗೆ 9-30ಕ್ಕೆ ರಾಜಭವನ ರಸ್ತೆಯ ಅಂಚೆ ಕಚೇರಿ ಮುಂಭಾಗ ಬೆಂಗಳೂರು ರಕ್ತ ಚಳವಳಿ ನಡೆಯಲಿದೆ. ರಾಜ್ಯವ್ಯಾಪಿ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದು ಕೃಷಿ ಮಸೂದೆ ರದ್ದು ಮಾಡುವಂತೆ ಕೋರಿ ಅಂಚೆ ಮೂಲಕ ಕಳುಹಿಸಲಿದ್ದಾರೆ. ರೈತ ಮುಖಂಡ ಕುರುಬೂರು ಶಾಂತಕುಮಾರ್ ದೆಹಲಿ ರೈತರ ಹೋರಾಟ ಬೆಂಬಲಿಸಿ 12 ಗಂಟೆಯಿಂದ ಎರಡು ಗಂಟೆ ತನಕ ಬೆಂಗಳೂರು ಯಲಹಂಕ ಹೆದ್ದಾರಿ ರಸ್ತೆ ಬಂದ್, ಯಲಹಂಕ ಪೊಲೀಸ್ ಠಾಣೆ ವೃತ್ತದಲ್ಲಿ ಚಳುವಳಿ ನಡೆಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೈತ ಮುಖಂಡ ಕುರುಬೂರು ಶಾಂತಕುಮಾರ್, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್ ಬಲದ ಮೂಲಕ ಸಾಕಷ್ಟು ಕಿರುಕುಳ ನೀಡುತ್ತಿದೆ. ಇದೇ ಸರ್ಕಾರ ಚಳವಳಿನಿರತ ರೈತರ ಜೊತೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ನೀಡುತ್ತಿದೆ. ಚಳವಳಿ ನಡೆಯುತ್ತಿರುವ ಜಾಗದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿ ರಸ್ತೆಗಳಿಗೆ ಮುಳ್ಳು ತಂತಿ ಬೇಲಿ ಹಾಕಿ ಇಬ್ಬಗೆ ನೀತಿ ಅನುಸರಿಸಿದೆ. ಇದರ ವಿರುದ್ಧ ಯಲಹಂಕ ಪೊಲೀಸ್ ಠಾಣೆ ಬಳಿ ಇರುವ ವೃತ್ತದಲ್ಲಿ ಹೆದ್ದಾರಿ ರಸ್ತೆ ಬಂದ್ ಚಳುವಳಿ ನಡೆಸುವ ಮೂಲಕ ದೇಶದ ರೈತರ ಹೋರಾಟವನ್ನು ಬೆಂಬಲಿಸಲಾಗುವುದು. 25 ಜಿಲ್ಲೆಗಳಿಗೂ ಹೆಚ್ಚು ಕಡೆ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ಮುಂದಾಗಿದ್ದಾರೆ. ಸರ್ಕಾರ ಎಚ್ಚೆತ್ತು ರೈತರ ಸಮಸ್ಯೆ ಬಗೆಹರಿಸಬೇಕಿದೆ. ಸರ್ಕಾರ ಲಘುವಾಗಿ ಕಂಡರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗ್ತದೆ. ಕರ್ನಾಟಕದ ಸಿನಿಮಾ ನಟರು, ಮಠಗಳ ಮುಖ್ಯಸ್ಥರೂ ಬೀದಿಗಿಳಿಯಬೇಕೆಂದು ಮನವಿ ಮಾಡಿದರು. ರೈತರು ತಡೆಯುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು: ಬೆಂಗಳೂರು - ಗೋವಾ (ರಾಷ್ಟ್ರೀಯ ಹೆದ್ದಾರಿ), ಬೆಂಗಳೂರು - ಹೈದರಾಬಾದ್ (ರಾಷ್ಟ್ರೀಯ ಹೆದ್ದಾರಿ), ಪೂನಾ - ಬೆಂಗಳೂರು (ರಾಷ್ಟ್ರೀಯ ಹೆದ್ದಾರಿ), ಬೆಂಗಳೂರು - ಚೆನ್ನೈ (ರಾಷ್ಟ್ರೀಯ ಹೆದ್ದಾರಿ), ಬೆಂಗಳೂರು - ಮೈಸೂರು ರೋಡ್(ರಾಜ್ಯ ಹೆದ್ದಾರಿ), ಬೆಂಗಳೂರು ಟೂ ಚಾಮರಾಜನಗರ (ರಾಜ್ಯ ಹೆದ್ದಾರಿ), ಬೆಂಗಳೂರು ಟೂ ಮಾಗಡಿ ರೋಡ್ (ರಾಜ್ಯ ಹೆದ್ದಾರಿ), ಬೆಂಗಳೂರು ಟೂ ಶಿವಮೊಗ್ಗ (ರಾಜ್ಯ ಹೆದ್ದಾರಿ), ಬೆಂಗಳೂರು ಟೂ ದೊಡ್ಡಬಳ್ಳಾಪುರ (ರಾಜ್ಯ ಹೆದ್ದಾರಿ) ಬಂದ್ ಮಾಡಲಿದ್ದಾರೆ.