ಬೆಂಗಳೂರು : ಉತ್ತರಪ್ರದೇಶ ಸರ್ಕಾರದ ದೌರ್ಜನ್ಯ, ದಬ್ಬಾಳಿಕೆ, ದಮನ ನೀತಿ ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಗರದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಜನಧ್ವನಿ ಹೆಸರಲ್ಲಿ ಪ್ರತಿಭಟನೆ ನಡೆಸಲಾಯಿತು. ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಮೇಲಿನ ಸಿಬಿಐ ದಾಳಿ ಖಂಡಿಸಿ ಪ್ರತಿಭಟಿಸಲಾಯಿತು.
ಮಾಜಿ ಸಚಿವ ಹೆಚ್ ಎಂ ರೇವಣ್ಣ ಮಾತನಾಡಿ, ದೇಶದ ಉದ್ದಗಲಕ್ಕೂ ನಡೆಯುತ್ತಿರುವ ಅತ್ಯಾಚಾರದ ಹಿಂದೆ ಬಿಜೆಪಿ ನಾಯಕರೇ ಗೋಚರಿಸುತ್ತಿದ್ದಾರೆ. ಇವರು ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷದ ನಾಯಕರ ಮೇಲಿನ ದಾಳಿಗೆ ಬಳಸಿಕೊಳ್ಳುತ್ತಿದ್ದಾರೆ. ಡಿಕೆಶಿ ನಿತ್ಯ ಪಕ್ಷವನ್ನು ಕಟ್ಟುವ ಚಟುವಟಿಕೆಗಳಲ್ಲಿ ನಿರತರಾಗಿರುತ್ತಿದ್ದರು. ಅದನ್ನು ಸಹಿಸಲಾಗದೇ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ದೂರಿದರು.
ಈ ವೇಳೆ ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ, ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಮಾಜಿ ಸಚಿವ ಕೆ ಜೆ ಜಾರ್ಜ್ ಹಾಗೂ ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು. ದೇಶದಲ್ಲಿ ದಿನೇದಿನೆ ಸ್ವಾತಂತ್ರ್ಯ ಅಳಿಯುತ್ತಿದೆ. ಅತ್ಯಾಚಾರ ನಡೆಸಿದವರಿಗೆ ಉತ್ತರಪ್ರದೇಶ ಸರ್ಕಾರ ರಕ್ಷಣೆ ನೀಡುತ್ತಿದೆ. ಅತ್ಯಾಚಾರಕ್ಕೊಳಗಾದವರಿಗೆ ಭದ್ರತೆ ಇಲ್ಲ. ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಅತ್ಯಾಚಾರ ನಡೆದಿದೆ. ದಲಿತರು, ಹೆಣ್ಣು ಮಕ್ಕಳಿಗೆ ಗೌರವ, ಭದ್ರತೆ ಇಲ್ಲ. ಮಹಿಳೆಯರ ರಕ್ಷಣೆಗೆ ತಾನಿರುವುದಾಗಿ ಮೋದಿ ಹೇಳಿದ್ದರು. ರಾಮನ ಹೆಸರಿನಲ್ಲಿರುವ ರಾವಣ ಸಂಸ್ಕೃತಿಯ ಸರ್ಕಾರ ದೇಶದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಎಂಎಲ್ಸಿ ಬಿ ಕೆ ಹರಿಪ್ರಸಾದ್, ಮಾಜಿ ಗೃಹ ಸಚಿವ ರಾಮಲಿಂಗ ರೆಡ್ಡಿ, ರಾಜ್ಯಸಭೆ ಸದಸ್ಯ ಡಾ. ಎಲ್ ಹನುಮಂತಯ್ಯ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ ಪುಷ್ಪಾ ಅಮರ್‌ನಾಥ್, ನಜೀರ್ ಅಹ್ಮದ್, ಸೌಮ್ಯ ರೆಡ್ಡಿ ಮತ್ತಿತರರು ಮಾತನಾಡಿದರು.