ಬೆಂಗಳೂರು: ನಗರದ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಕಾಂಗ್ರೆಸ್ -ಜೆಡಿಎಸ್ ಪಾಲಿಕೆ ಸದಸ್ಯರು ಬಿಬಿಎಂಪಿಯ ಕೌನ್ಸಿಲ್ ಸಭಾಂಗಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮೇಯರ್ ಗೌತಮ್ ಕುಮಾರ್ ಆರ್ಎಸ್ಎಸ್ ಏಜೆಂಟ್ನಂತೆ ವರ್ತಿಸುತ್ತಿದ್ದಾರೆ. ಜನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿಸಿ ತೀರ್ಮಾನ ತಗೊಂಡಿದ್ದಾರೆ. ಎಲ್ಲ ಸಮುದಾಯದ ಜನ ಸಾಂವಿಧಾನಿಕ ಹಕ್ಕಿನಂತೆ ಪ್ರತಿಭಟನೆ ನಡೆಸಲು ಇದ್ದ ಪ್ರಮುಖ ಜಾಗ ಟೌನ್ ಹಾಲ್. ಆದರೆ, ನೆಪಗಳನ್ನು ಹೇಳಿಕೊಂಡು ಪಾಲಿಕೆ ಆಡಳಿತ ಪಕ್ಷ ಬಿಜೆಪಿ ಪ್ರತಿಭಟನೆ ನಡೆಸದಂತೆ ಶನಿವಾರ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.
ಈ ವೇಳೆ, ಸ್ಥಳಕ್ಕಾಗಮಿಸಿದ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಕಚೇರಿಗೂ ಮುತ್ತಿಗೆ ಹಾಕಿದರು. ಪ್ರತಿಭಟನೆ ರದ್ದು ಮಾಡಿರೋದನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಕಮಿಷನರ್ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಉತ್ತರ ನೀಡದೇ ಕಮಿಷನರ್ ತೆರಳಿದರು.
ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ವಾಜಿದ್, ಯಾರದ್ದೋ ಆದೇಶದ ಮೇರೆಗೆ ಈ ಪ್ರತಿಭಟನೆ ನಿರಾಕರಿಸಿದ್ದಾರೆ. ಕೌನ್ಸಿಲ್ನಲ್ಲಿ ಚರ್ಚೆಯನ್ನೂ ನಡೆಸಿಲ್ಲ. ಬಿಜೆಪಿ ಏಕಾಏಕಿ ಸುಮೋಟೋ ನಿರ್ಣಯ ತೆಗೆದುಕೊಂಡಿದೆ ಎಂದರು.
ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಮಾತನಾಡಿ, ಟೌನ್ ಹಾಲ್ ಮುಂಭಾಗ ಸಾಕಷ್ಟು ಹೋರಾಟಗಳು ನಡೆದ ಇತಿಹಾಸ ಇದೆ. ಬೇರೆ ರಾಜ್ಯದ ಜನರೂ ಪ್ರತಿಭಟನೆ ನಡೆಸುತ್ತಾರೆ. ಏಕಾಏಕಿ ಬಿಜೆಪಿ ತಗೆದುಕೊಂಡ ಈ ನಿರ್ಧಾರ ಸರಿಯಲ್ಲ. ನಿರ್ಣಯ ಹಿಂಪಡೆಯುವವರೆಗೂ ಪ್ರತಿಭಟನೆ ನಿಲ್ಲೋದಿಲ್ಲ ಎಂದು ತಿಳಿಸಿದರು.
ಇದೇ ವಿಚಾರಕ್ಕೆ ಕೌನ್ಸಿಲ್ ಸಭೆಯಲ್ಲೂ ಗದ್ದಲ ಮುಂದುವರಿಯಿತು. ಕಾನೂನಿನಲ್ಲಿ ಏನಿದೆ ತಿಳಿಸಿ ಎಂದು ಕಾಂಗ್ರೆಸ್ ಆಗ್ರಹಿಸಿತು. ಆದ್ರೆ ಕೌನ್ಸಿಲ್ ಹಾಲ್ನಲ್ಲಿ ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರೋದ್ರಿಂದ ಸಂಖ್ಯಾಬಲದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.