ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ದ ಅಣಕು ಶವಯಾತ್ರೆ ನಡೆಸುವ ಮೂಲಕ ನಗರದ ಮೌರ್ಯ ಸರ್ಕಲ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರೈತರ ಪಾಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸತ್ತು ಹೋಗಿವೆ. ಹೀಗಾಗಿ ಚಟ್ಟಕಟ್ಟಿ, ಅಣಕು ಶವಯಾತ್ರೆ ಮಾಡುತ್ತಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆಗಳು ರೈತರ ಅಭ್ಯುದಯಕ್ಕೆ ಎಂದು ಸಿ ಎಂ ಯಡಿಯೂರಪ್ಪ ನಿನ್ನೆ ಹೇಳಿದ್ದಾರೆ. ಹೀಗಾಗಿ ಅವರು ಕಾಯ್ದೆ ಪರ ಇದ್ದಾರೆ. ಸರ್ಕಾರ ರೈತರನ್ನು ಕೈಚೆಲ್ಲಿ ಬಿಟ್ಟಿದೆ. ಇದರಿಂದ ಮಾರುಕಟ್ಟೆ , ಕೃಷಿ ಭೂಮಿ ಸಂಪೂರ್ಣವಾಗಿ ಕಾರ್ಪೋರೇಟ್ ತೆಕ್ಕೆಗೆ ಬರಲಿವೆ. ಹಿಂದಿದ್ದ ಈಸ್ಟ್ ಇಂಡಿಯಾ ಕಂಪನಿಗಳ ಬದಲಿಗೆ, ಈಗ ಕಾರ್ಪೋರೇಟ್ ಕಂಪನಿ ಆಡಳಿತಗಳು ಬರಲಿವೆ ಎಂದರು.
ಸೋಮವಾರ ಕರ್ನಾಟಕ ಬಂದ್ ಸಂಪೂರ್ಣ ಸಫಲ ಆಗಲಿದೆ. ಈಗಾಗಲೇ ಹಲವು ಸಂಘಟನೆಗಳ ಬೆಂಬಲ ನೀಡಿವೆ. ವಿಧಾನಸಭೆಯಲ್ಲಿ ಭೂಸುಧಾರಣಾ ಹಾಗೂ ಎಪಿಎಂಸಿ ಕಾಯ್ದೆ ಮಂಡನೆ ಮಾಡುವ ಸಾಧ್ಯತೆ ಇದೆ. ಈ ವೇಳೆ ನಮ್ಮ ವಿರೋಧ ವ್ಯಕ್ತಪಡಿಸಲು, ಅಣಕು ಶವಯಾತ್ರೆ ಹಾಗೂ ಅಗ್ನಿಸ್ಪರ್ಶ ಕಾರ್ಯಕ್ರಮ ಮಾಡಲಿದ್ದೇವೆ ಎಂದರು. ರೈತರ ಪ್ರತಿಭಟನೆಗೆ ಬಿಗ್ ಬಾಸ್ ಸ್ಪರ್ಧಿ ಶಶಿಕುಮಾರ್ ಸಾಥ್ ನೀಡಿದರು.
ಕಳೆದ ಆರು ದಿನಗಳಿಂದ ಅಹೋರಾತ್ರಿ ಧರಣಿ ಮಾಡಿದ್ರೂ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ, ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಪ್ರತಿಭಟನಾಕಾರರು ಅಣಕು ಶವಯಾತ್ರೆ ಮಾಡಿದ್ದಾರೆ.