ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಹೊರ ರಾಜ್ಯದ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ನೂಕಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಇಬ್ಬರು ದಂಧೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಕುಮಾರ್ ಹಾಗೂ ಸುದೀಪ್ ಬಂಧಿತ ಆರೋಪಿಗಳು. ಆರೋಪಿಗಳು ಹೆಬ್ಬಾಳ ಕಿಂಗ್ಸ್ ಕೋರ್ಟ್ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆ ಪಡೆದು ಹೊರ ರಾಜ್ಯದ ಯುವತಿಯರನ್ನು ಕರೆಯಿಸಿಕೊಂಡು ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.
ಆರೋಪಿಗಳು ಹೊರ ರಾಜ್ಯದ ಯುವತಿಯರಿಗೆ ಬೆಂಗಳೂರಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕರೆ ತರುತ್ತಿದ್ದರು. ಬಳಿಕ ಯುವತಿಯರಿಗೆ ದಂಧೆಯಲ್ಲಿ ತೊಡಗಿಸಿಕೊಂಡರೆ ದಿನಕ್ಕೆ ಸಾವಿರಾರು ರೂ.ಸಂಪಾದನೆ ಮಾಡಬಹುದು ಎಂದು ಆಸೆ ತೋರಿಸಿ ದಂಧೆಗೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗ್ತಿದೆ. ಗಿರಾಕಿಗಳಿಗೆ ಮೊಬೈಲ್ನಲ್ಲಿಯೇ ಯುವತಿಯರ ಫೋಟೊ ಕಳುಹಿಸಿ ಸೆಳೆಯುತ್ತಿದ್ದರು. ಆರೋಪಿಗಳು ವ್ಯವಸ್ಥಿತವಾಗಿ ಹಲವು ತಿಂಗಳಿಂದ ಈ ಅವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಸೆರೆಸಿಕ್ಕ ಇಬ್ಬರು ಆರೋಪಿಗಳ ವಿರುದ್ಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.