ಬೆಂಗಳೂರು: ಮಾನವ ಕಳ್ಳಸಾಗಣೆ ಮೂಲಕ ಬಾಂಗ್ಲಾದೇಶದ ಯುವತಿರನ್ನು ಬೆಂಗಳೂರಿಗೆ ಕರೆತಂದು ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಬಾಂಗ್ಲಾ ಹಾಗೂ ಓರ್ವ ದೆಹಲಿ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಜಾಲ ಬೇಧಿಸಿ ಇಬ್ಬರು ಬಾಂಗ್ಲಾದೇಶ ಹಾಗೂ ಓರ್ವ ದೆಹಲಿ ಮೂಲದ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಅಷ್ರಫ್ ಮೊಂಡಾಲ್, ಎಂ.ಡಿ.ಹುಸೇನ್ ಹಾಗೂ ಟುಟಲ್ ಬಂಧಿತ ಆರೋಪಿಗಳು. ಅಮಾಯಕ ಯುವತಿಯರನ್ನ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ನಂತ್ರ ಬರುವ ಸಂಬಳದಲ್ಲಿ ಐಷಾರಾಮಿ ಜೀವನ ನಡೆಸಬಹುದು ಎಂದು ಸಿಲಿಕಾನ್ ಸಿಟಿಗೆ ಕರೆತರುತ್ತಿದ್ದರಂತೆ. ನಂತರ ಸ್ಪಾದಲ್ಲಿ ಕೆಲಸಕ್ಕೆ ಇರಿಸಿ ಗಿರಾಕಿಗಳನ್ನ ಬರಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರಂತೆ. ಹಣದ ಅನಿವಾರ್ಯತೆಯಿಂದ ಬೇರೆ ದಾರಿ ಕಾಣದೆ ಯುವತಿಯರು ಇದಕ್ಕೆ ಸಹಕಾರ ನೀಡ್ತಿದ್ರು ಎನ್ನಲಾಗಿದೆ.
ಮಾಹಿತಿ ತಿಳಿದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಬಾಂಗ್ಲಾ ಮೂಲದ ಯುವತಿಯರನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ ಐಷಾರಾಮಿ ಜೀವನ ನಡೆಸಲು ಈ ದಂಧೆ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆರೋಪಿಗಳಿಂದ ನಗದು, ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.