2023ನೇ ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಮತದಾನಕ್ಕೆ 8 ದಿನಗಳು ಮಾತ್ರ ಬಾಕಿ ಉಳಿದಿದೆ. ಈ ವೇಳೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಪಕ್ಷಗಳು ಕಾರ್ಯ ನಿರತವಾಗಿದೆ. ಚಿತ್ರೋದ್ಯಮ ವಿಷಯಕ್ಕೆ ಬಂದಾಗ ಈ ಮೂರು ಪಕ್ಷಗಳಿಂದ ಸಿಗಲಿರುವ ಸೌಲಭ್ಯಗಳೇನು ಎಂದು ನೋಡೋಣ ಬನ್ನಿ.
ಬಿಜೆಪಿ ಪಕ್ಷ ರಾಜ್ಯದ ಜನತೆ ಜೊತೆಗೆ ಸಿನಿಮಾ ಕ್ಷೇತ್ರಕ್ಕೂ ಭರವಸೆ ನೀಡಿದೆ. ಇದು ಮತದಾರರನ್ನು ಸೆಳೆಯುವ ಒಂದು ತಂತ್ರ ಕೂಡ ಹೌದು. ನಿನ್ನೆಯಷ್ಟೇ ಭಾರತೀಯ ಜನತಾ ಪಾರ್ಟಿ ಸಿನಿಮಾ ಕ್ಷೇತ್ರಕ್ಕೆ ಇಡೀ ಕನ್ನಡ ಚಿತ್ರರಂಗ ಅಲ್ಲದೇ ಕೋಟ್ಯಂತರ ಅಭಿಮಾನಿಗಳು ಮೆಚ್ಚುವಂತಹ ಭರವಸೆ ಸಹ ನೀಡಿದೆ. ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ದೇಶದ ಅತಿದೊಡ್ಡ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಈ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುವುದಾಗಿ ಬಿಜೆಪಿ ಪಕ್ಷ ಹೇಳುವ ಮೂಲಕ ಚಿತ್ರರಂಗದವರ ಗಮನ ಸೆಳೆದಿದೆ.
ಕಾಂಗ್ರೆಸ್ ಪಕ್ಷ ಕೂಡ ಕನ್ನಡ ಚಿತ್ರರಂಗಕ್ಕೆ ಸಹಾಯ ಆಗುವ ಭರವಸೆಗಳನ್ನು ನೀಡಿದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರಲ್ಲಿ, ಹೃದಯ ಆರೋಗ್ಯ ಯೋಜನೆ ಅಡಿ ವೈದ್ಯರು, ಆಸ್ಪತ್ರೆಗಳು, ಡಿಫ್ರಿಲೇಟರ್ (ಎಇಡಿ)ಗಳನ್ನು ಕೊಳ್ಳುವುದಕ್ಕೆ ಸಹಾಯ ಧನ ನೀಡಲಾಗುತ್ತೆ ಅಂತಾ ಹೇಳಿದೆ. ಡಾ. ರಾಜ್ಕುಮಾರ್ ಹೆಸರಲ್ಲಿ ಗುಣಮಟ್ಟದ ಸಿನಿಮಾ ನಗರಿ ನಿರ್ಮಾಣ ಮಾಡುವುದಾಗಿಯೂ ಹೇಳಿದೆ.
ಜೊತೆಗೆ ರಂಗಭೂಮಿ ಜನಪದ, ಸಿನಿಮಾ ಮತ್ತು ಇತರ ಕ್ಷೇತ್ರಗಳ ವೃತ್ತಿಪರ ಕಲಾವಿದರಿಗೆ ವಸತಿ ಯೋಜನೆ ರೂಪಿಸಿ ಅನುಷ್ಠಾನ ಮಾಡಲಿದೆಯಂತೆ. ಹಾಗೇ ಯಕ್ಷಗಾನ, ನಾಟಕ, ಸಂಗೀತ ಕಲಾ ಕ್ಷೇತ್ರದ ಕಲಾವಿದರ ಆರ್ಥಿಕ ಭದ್ರತೆಗೆ ಯೋಜನೆ ರೂಪಿಸಲಿದೆ. ವಿಶೇಷ ಚೇತನ ಕಲಾವಿದರಿಗೆ ವಿಶೇಷ ಪೋತ್ಸಾಹ, ಹಾಗೇ ಕನ್ನಡ ರಂಗಭೂಮಿ ಜನಪದ ಕಲೆ, ಜನಪದ ಹಾಡುಗಳ ಉತ್ತೇಜನಕ್ಕೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗುಬ್ಬಿ ವೀರಣ್ಣ ಬಯಲು ರಂಗಮಂದಿರ ಸ್ಥಾಪನೆ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ.
ಎರಡು ರಾಷ್ಟ್ರೀಯ ಪಕ್ಷಗಳ ಬಳಿಕ ಪ್ರಾದೇಶಿಕ ಜೆಡಿಎಸ್ ಕೂಡ ಸಿನಿಮಾ ರಂಗಕ್ಕೆ ಸಹಾಯ ಆಗುವ ಯೋಜನೆಗಳನ್ನು ಪ್ರಕಟಿಸಿದೆ. ಕಲಾವಿದರನ್ನು ವಸತಿ ಯೋಜನೆ ಅಡಿ ವಿಶೇಷ ಘಟಕಕ್ಕೆ ಸೇರಿಸಿ ವಸತಿ ನಿವೇಶನ ಸೌಕರ್ಯ ಒದಗಿಸಲಾಗುವುದು. ಕಲಾವಿದರಿಗೆ ಕೊಡುತ್ತಿರುವ 2,000 ರೂಪಾಯಿ ಪಿಂಚಣಿಯನ್ನು 4,000 ರೂಪಾಯಿಗೆ ಏರಿಸಲಾಗುವುದು ಎಂದು ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದೆ.
ಹೀಗೆ ಮೂರು ಪಕ್ಷಗಳು ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಪೋಷಕ ಕಲಾವಿದರು, ತಂತ್ರಜ್ಞರು, ಸಹ ಕಲಾವಿದರನ್ನು ಗಮನದಲ್ಲಿ ಇಟ್ಟು ಕೊಟ್ಟು ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಯಾವ ಪಕ್ಷ ಬಹುಮತ ಪಡೆಯಲಿದೆ, ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದ ಮೇಲೆ ನೀಡಿದ ಭರವಸೆಯನ್ನು ಎಷ್ಟರ ಮಟ್ಟಿಗೆ ಈಡೇರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ಇದನ್ನೂ ಓದಿ: ಎಸ್ಆರ್ಕೆ - ಸಲ್ಲು ಶೂಟಿಂಗ್ಗೆ ದಿನ ನಿಗದಿ: ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ
ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮನರಂಜನೆ ಅನ್ನೋದು ಅತ್ಯಗತ್ಯ. ಈ ಕಾರಣಕ್ಕಾಗಿ ಪ್ರತಿಯೊಬ್ಬರ ಜೀವನದಲ್ಲಿ ಎಂಟರ್ಟೈನ್ಮೆಂಟ್ ಬಹಳ ಮುಖ್ಯ. ಹೀಗಾಗಿ ಸಿನಿಮಾ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ರಾಜ್ಯಕ್ಕೆ ಈ ಉದ್ಯಮದ ಕೊಡುಗೆ ಅಪಾರ. ಸದ್ಯ ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ರಾಜ್ಯದ ಮೂರು ಪಕ್ಷಗಳ ಪರವಾಗಿ, ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ.