ಬೆಂಗಳೂರು: ಡಿ.ಜೆ. ಹಳ್ಳಿ ಠಾಣೆ ಬಳಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಜೆ. ಹಳ್ಳಿ ಠಾಣೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ಭೇಟಿ ನೀಡಿ ತನಿಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಡಿ.ಜೆ. ಹಳ್ಳಿ ಠಾಣೆಯಲ್ಲಿ ಗಲಭೆ ಆರೋಪಿಗಳಾದ ವಾಜಿದ್ ಪಾಷಾ ಮತ್ತು ಇತರರ ವಿಚಾರಣೆ ನಡೆಯುತ್ತಿದ್ದು, ಸಂಪೂರ್ಣ ಮಾಹಿತಿ ಪಡೆಯಲು ಖುದ್ದು ಆಯುಕ್ತರೇ ಡಿ.ಜೆ. ಹಳ್ಳಿ ಠಾಣೆಗೆ ಭೇಟಿ ನೀಡಿದ್ದರು.
ಠಾಣೆಯಲ್ಲಿ ಪೊಲೀಸ್ ಆಯುಕ್ತರು ಸಭೆ ನಡೆಸಿದರು. ಗಲಭೆ ಸಂಬಂಧಿತ ಪ್ರಕರಣಗಳ ಎಲ್ಲಾ ತನಿಖಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಗೂ ಮೊದಲು ಆಯುಕ್ತರು ಇತರ ಅಧಿಕಾರಗಳೊಂದಿಗೆ ಡಿ.ಜೆ. ಹಳ್ಳಿ ಠಾಣೆ ಬಳಿ ಪರಿಸ್ಥಿತಿ ಅವಲೋಕನ ಮಾಡಿ ಮಾಹಿತಿ ಪಡೆದರು.
ಸಭೆ ಬಳಿಕ ಮಾತನಾಡಿದ ಕಮಲ್ ಪಂತ್, ಸದ್ಯ ಗಲಭೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ. ಆರೋಪಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆ ಮಾಡಲಾಗ್ತಿದೆ. ತನಿಖೆಯ ಪ್ರಗತಿಯ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಈಗ ಏನೂ ಹೇಳಲು ಆಗಲ್ಲ. ಘಟನೆಗೆ ಸಂಬಂಧಪಟ್ಟಂತೆ ನನಗೆ ಯಾರೊಬ್ಬರೂ ವಾರ್ನಿಂಗ್ ಮಾಡಿಲ್ಲ, ನನ್ನ ಸರ್ವೀಸ್ನಲ್ಲಿ ಈ ರೀತಿ ಘಟನೆ ಯಾವುದೂ ನಡೆದಿಲ್ಲ. ಎಲ್ಲರೂ ಅವರವರ ಮಾಹಿತಿಯನ್ನು ನಮಗೆ ಹೇಳ್ತಾ ಇದ್ದಾರೆ. ತನಿಖೆ ಮಾಡ್ತೀವಿ, ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ತೀವಿ. ಸಿಸಿಬಿ ಪೊಲೀಸರು ಕೂಡ ಪ್ರಕರಣದ ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.