ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯದ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವಕ್ತಾರ ರಮೇಶ್ ಬಾಬು ಜೊತೆ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬಿಜೆಪಿ ಸಮಾವೇಶಗಳಲ್ಲಿ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೆಸರು ಪ್ರಸ್ತಾಪವನ್ನೇ ಮಾಡುತ್ತಿಲ್ಲ. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಅವರು ಮುಖ್ಯಮಂತ್ರಿಗಳ ಹೆಸರೂ ತೆಗೆದುಕೊಳ್ಳಲಿಲ್ಲ. ಒರ್ವ ಮುಖ್ಯಮಂತ್ರಿಗಳ ಬಗ್ಗೆ ಅವರಿಗೆ ಇಷ್ಟೋಂದು ಸಿಟ್ಟು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಈ ಸರ್ಕಾರ 40% ಸರ್ಕಾರವಾಗಿದೆ, ಹೀಗಾಗಿ ನಾವು ಇವರ ಹೆಸರು ತೆಗೆದುಕೊಂಡರೆ ಜನ ನಮಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ರಾಜ್ಯ ನಾಯಕರ ಹೆಸರು ಹೇಳುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಸಂಡೂರಿನಲ್ಲಿ ಅಮಿತ್ ಶಾ ಅವರು ಮೋದಿ ಅವರ ಮುಖ ನೋಡಿ ಮತ ನೀಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದಾರೆ. ಇಲ್ಲಿ ಸದನದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಇಲ್ಲಿ ರಾಜ್ಯ ನಾಯಕರು ಜನರ ವಿಶ್ವಾಸ ಇಟ್ಟುಕೊಂಡಿಲ್ಲ. ಈ ಸರ್ಕಾರ 40% ಸರ್ಕಾರ, ಪೇಸಿಎಂ ಎಂದು ದೇಶದಲ್ಲಿ ಕುಖ್ಯಾತಿ ಪಡೆದಿದ್ದಾರೆ. ಹೀಗಾಗಿ ಮೋದಿ ಮುಖ ನೋಡಿ ಮತ ನೀಡಿ ಎಂದು ಹೇಳುತ್ತಿದ್ದಾರೆ ಎಂದರು.
ಯಾವುದನ್ನೂ ಬಿಡದೆ ಲೂಟಿ ಮಾಡುತ್ತಿದ್ದಾರೆ: ಸರ್ಕಾರ ನಮಗೆ ದಿನಕ್ಕೊಂದು ಹಗರಣ ನೀಡುತ್ತಿದ್ದಾರೆ. ನಾವು ದಾಖಲೆ ಸಮೇತ ಮಾತನಾಡಿದರೆ ನಮ್ಮ ವಿರುದ್ಧ ಸಿಐಡಿ ನೋಟೀಸ್ ನೀಡುತ್ತಾರೆ. ಇವರು ಯಾವುದನ್ನೂ ಬಿಡದೆ ಲೂಟಿ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಕಾಕಂಬಿಯಲ್ಲೂ ಹಗರಣ ಮಾಡುತ್ತಿದ್ದಾರೆ. ಪಠ್ಯಪುಸ್ತಕ, ಶಾಲಾ ಬ್ಯಾಗ್, ಶೂ ಯಾವುದನ್ನು ಬಿಡುತ್ತಿಲ್ಲ. ಎಲ್ಲದರಲ್ಲೂ ಹಗರಣ. ಮುಂಬೈ ಮೂಲದ ಕೆ.ಎನ್ ರಿಸೋರ್ಸಸ್ ಎಂಬ ಖಾಸಗಿ ಕಂಪನಿ ಇದೆ. ಇವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ 2 ಲಕ್ಷ ಮೆ.ಟನ್ ರಫ್ತಿಗೆ ಅನುಮತಿ ಕೇಳುತ್ತಾರೆ. ಅವರ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಸರ್ಕಾರ ವಿಶೇಷ ಪ್ರೀತಿಯಿಂದ ಎಂ1 ಎಂ2 ಪರವಾನಿಗೆ ಕೊಡಿಸುತ್ತಾರೆ ಎಂದು ಆರೋಪಿಸಿದರು.
ಕೇವಲ 2 ತಿಂಗಳಲ್ಲಿ 0 ದಾಖಲೆ ಇದ್ದರೂ ಪರವಾನಿಗೆ ನೀಡುತ್ತಿದ್ದಾರೆ. ಇದರ ವಿರುದ್ಧ ಸ್ಟೇಟ್ ಡಿಸ್ಟಿಲರಿ ಏನರ್ಸ್ ಅಸೋಸಿಯೇಷನ್ ಅವರು ಪ್ರತಿಭಟನೆ ಮಾಡುತ್ತಾರೆ. ಕಾಕಂಬಿ ನಮಗೆ ಸಾಲುತ್ತಿಲ್ಲ. ರಫ್ತು ಮಾಡಿದರೆ ನಮಗೆ ಸಮಸ್ಯೆಯಾಗುತ್ತದೆ ಎಂದು ಅವರು ವಾದಿಸುತ್ತಿದ್ದಾರೆ. ರಾಜ್ಯ ಬಜೆಟ್ ನಲ್ಲಿ ಅಬಕಾರಿಯಿಂದ 39 ಸಾವಿರ ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇಟ್ಟಿದ್ದು, ಇತ್ತ ಕಾಕಂಬಿ ಅಲ್ಲದಂತೆ ಮಾಡುತ್ತಿದ್ದಾರೆ. ಯಾರ ಲಾಭಕ್ಕೆ ಈ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ? ಇವರಿಗೆ ರಫ್ತಿಗೆ ಅನುಮತಿ ನೀಡಬೇಡಿ, ಸರ್ಕಾರದ ಆದಾಯಕ್ಕೆ ತೊಂದರೆಯಾಗುತ್ತದೆ ಎಂದು ಪ್ರತಿಭಟನೆ ಮಾಡಿದರೂ ಕಿಂಚಿತ್ತೂ ಬೆಲೆ ನೀಡಲಿಲ್ಲ ಎಂದು ಹೇಳಿದರು.
ಈ ಕಂಪನಿ ಕಳೆದ 3 ವರ್ಷಗಳಿಂದ ಜಿಎಸ್ಟಿ ಪಾವತಿಸಿಲ್ಲ. ಆದರೂ ಅನುಮತಿ ನೀಡುತ್ತಾರೆ. ಅನುಮತಿ ಕೇಳುವಾಗ ಈ ಹಿಂದೆ ರಫ್ತು, ಕಾಕಂಬಿ ರಫ್ತಿಗೆ ವ್ಯವಸ್ಥೆ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ. ವಿಶೇಷವಾಗಿ ಇವರು ಎಲ್ಲಿಗೆ ರಫ್ತು ಮಾಡುತ್ತೇವೆ ಎಂದು ತಿಳಿಸಿಯೂ ಇಲ್ಲ. ಆದರೂ ಅನುಮತಿ ನೀಡಿರುವುದು ಹೇಗೆ? ಎಂದು ಪ್ರಶ್ನಿಸಿದರು.
ಗೋವಾದಿಂದ ರಫ್ತಿಗೆ ಅನುಮತಿ ನೀಡಿರುವುದೇಕೆ: ಒಂದು ಮೆಟ್ರಿಕ್ ಟನ್ ಕಾಕಂಬಿ 10 ಸಾವಿರ ಬೆಲೆ ಇದೆ. 2 ಲಕ್ಷ ಮೆ. ಟನ್ಗೆ 200 ಕೋಟಿ ಆಗಲಿದೆ. ಕೆ.ಎಲ್ ರಿಸೋರ್ಸ್ ಅವರು ರಾಜ್ಯದಿಂದ 2 ಲಕ್ಷ ಮೆ.ಟನ್ ಪಡೆದು ಅದನ್ನು ಗೋವಾ ಮೂಲಕವಾಗಿ ರಫ್ತು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಕಾನೂನು ಪ್ರಕಾರವಾಗಿದ್ದರೆ ರಾಜ್ಯದಿಂದಲೇ ಮಾಡಬಹುದಾಗಿತ್ತು. ಆದರೆ ಗೋವಾದಿಂದ ಮಾಡಿದರೆ ನಮ್ಮ ಸರ್ಕಾರಕ್ಕೆ ಸಿಗುವ ತೆರಿಗೆಯೂ ಸಿಗುವುದಿಲ್ಲ. ನಮ್ಮಲ್ಲೇ ಮಲ್ಪೆ ಬಂದರು ಇರುವಾಗ ಗೋವಾದಿಂದ ರಫ್ತಿಗೆ ಅನುಮತಿ ನೀಡಿರುವುದೇಕೆ? ಇವರು ಡಿಸ್ಟಿಲರಿ ಮಾಲೀಕರ ಮಾತು ಕೇಳಿದ್ದರೆ 60 ಕೋಟಿ ತೆರಿಗೆ ಮೂಲಕ ಸಂಗ್ರಹವಾಗುತ್ತಿತ್ತು. ನಂತರ ಮದ್ಯ ಮಾರಾಟದಿಂದಲೂ ತೆರಿಗೆ ಸಂಗ್ರಹವಾಗುತ್ತಿತ್ತು ಎಂದರು.
2 ಲಕ್ಷ ಕೋಟಿ ಎಂದು ಲೆಕ್ಕ ಹಾಕಿದರೂ 40% ಕಮಿಷನ್ ನಂತೆ 80 ಕೋಟಿಗೆ ಡೀಲ್ ಆಗಿದೆ. ಇದರ ಹಿಂದೆ ಇಬ್ಬರು ಬಿಜೆಪಿ ಸಂಸದರು, ಕೇಂದ್ರ ಹಣಕಾಸು ಸಚಿವರು ಶಿಫಾರಸ್ಸು ಮಾಡಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಬಕಾರಿ ಸಚಿವರು, ಹಾಗೂ ಆಯುಕ್ತರನ್ನು ಕರೆಸಿ ಇದನ್ನು ಸುಗಮವಾಗಿ ಸಾಗುವಂತೆ ಮಾಡಿಕೊಟ್ಟಿದ್ದಾರೆ. ಈ ಆರೋಪ ನಮ್ಮದಲ್ಲ, ಇದು ಕಾಕಂಬಿ ಟ್ರಾನ್ಸ್ಪೋರ್ಟ್ ಮಾಡುವ ಗುತ್ತಿಗೆದಾರರು ಶಿವರಾಜ್ ಹಾಗೂ ಕೆ.ಎನ್ ರಿಸೋರ್ಸಸ್ ಪ್ರತಿನಿಧಿ ಸುರೇಶ್ ಅವರ ನಡುವಣ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಿದರು.
ಬಿಜೆಪಿ ಸಂಸದರು ನೇರವಾಗಿ ಬೊಮ್ಮಾಯಿ ಅವರ ಬಳಿ ಹೋಗಿ ಡೀಲ್ ಮಾಡಿದ್ದಾರೆ. ಇದು ದೊಡ್ಡ ಮಟ್ಟದ ಡೀಲ್ ಎಂದು ಅವರು ದೂರವಾಣಿಯಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳೇ ಅಬಕಾರಿ ಸಚಿವರು ಹಾಗೂ ಆಯುಕ್ತರನ್ನು ಕರೆಸಿ ಇದಕ್ಕೆ ಅನುಮತಿ ಕೊಡಿಸಿದ್ದಾರೆ. ಹೈಕಮಾಂಡ್ ಮನವೊಲಿಸಲು ಈ ಅನುಮತಿ ಕೊಡಿಸಿದರಾ? ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಹೈಕಮಾಂಡ್ ಮನವೊಲಿಸಲು ಈ ಅನುಮತಿ ಕೊಟ್ಟರಾ? ಕನ್ನಡಿಗರಿಗೆ ಅನ್ಯಾಯ ಮಾಡಿ ಹೈಕಮಾಂಡ್ ಮನವೊಲಿಸುತ್ತೀರಾ? ಕಾನೂನುಬದ್ಧವಾಗಿ ಮಾಡಿದ್ದರೆ ಸರ್ಕಾರದ ಬೊಕ್ಕಸಕ್ಕೆ ಆದಾಯವಾದರೂ ಬರುತ್ತಿತ್ತು ಎಂದು ಕಿಡಿಕಾರಿದರು.
ಸರ್ಕಾರದ ಹಗರಣದ ಬಗ್ಗೆ ನಾವು ದಾಖಲೆ ನೀಡಿ ಪತ್ರಿಕಾಗೋಷ್ಠಿ ಮಾಡಿ, ಮಾಡಿ ನಾವು ನಗೆಪಾಟಲಿಗೆ ಈಡಾಗುತ್ತಿದ್ದೇವೆ. ಮಾತೆತ್ತಿದರೆ ದಕ್ಷ ಆಡಳಿತ ನೀಡುತ್ತೇವೆ ಎನ್ನುತ್ತಿದ್ದಾರೆ. ಸದನದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಟೇಬಲ್ ಕುಟ್ಟಿ ತಾವು ಪ್ರಾಮಾಣಿಕರು, ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಅವರ ಕಾಲದಲ್ಲಿ ಹಗರಣ ನಡೆದಿದೆ ಎಂದು ಹೇಳಿದರು. ನಿಮ್ಮ ಆರೋಪವೂ ಸೇರಿದಂತೆ ನಮ್ಮ ಆರೋಪಗಳ ವಿಚಾರಣೆಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆ ನಡೆಸಿ ಎಂದು ಸಾವಲು ಹಾಕಿದರು.
ಬಿಜೆಪಿಯವರಿಗೆ ಶೋಭಕ್ಕ ಗೊತ್ತೇ ಹೊರತು ಅಬ್ಬಕ್ಕನ ಬಗ್ಗೆ ಗೊತ್ತಿಲ್ಲ: ಇಂತಹ ತನಿಖೆಗೆ ಕಾಂಗ್ರೆಸ್ ಸಿದ್ಧವಿದೆ. ನೀವು ಸಿದ್ಧವಿದ್ದೀರಾ? ಚುನಾವಣೆಯನ್ನು 2 ತಿಂಗಳು ಮುಂದಕ್ಕೆ ಹಾಕಿ ಈ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ. ರಾಜ್ಯದ ಜನರಿಗೆ ಯಾರು ಪ್ರಾಮಾಣಿಕರು ಎಂದು ಜನರಿಗೆ ಗೊತ್ತಾಗಲಿ. ಈ ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ಈಗಾಗಲೇ ದೂರು ದಾಖಲಾಗಿದೆ. ಈ ಬಗ್ಗೆ ಚರ್ಚೆ ಮಾಡದೇ, ನಳೀನ್ ಕುಮಾರ್ ಕಟೀಲ್ ಅವರು ಟಿಪ್ಪು ವರ್ಸಸ್ ಸಾರ್ವಕರ್, ಟಿಪ್ಪು ವರ್ಸಸ್ ಅಬ್ಬಕ್ಕ ಅವರ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರಿಗೆ ಶೋಭಕ್ಕ ಗೊತ್ತೇ ಹೊರತು ಅಬ್ಬಕ್ಕನ ಬಗ್ಗೆ ಗೊತ್ತಿಲ್ಲ. ಇವರು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಟಿಪ್ಪು ವರ್ಸಸ್ ಅಬ್ಬಕ್ಕ ಎನ್ನುತ್ತಿದ್ದಾರೆ. ಈ ಬಗ್ಗೆ ಕಟೀಲ್ ಅವರು ಚರ್ಚೆಗೆ ಬನ್ನಿ. ಬಿಜೆಪಿ ಭರವಸೆ ಎಂಬ ಪೋಸ್ಟರ್ ಹಾಕುತ್ತಿದ್ದೀರಿ. ಯಾವ ಭರವಸೆ ಈಡೇರಿಸಿದ್ದೀರಿ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಇದನ್ನೂ ಓದಿ:ಮುಂದಿನ ಚುನಾವಣೆ ಯಡಿಯೂರಪ್ಪ ನೇತೃತ್ವದಲ್ಲೇ ಎಂದು ಬಿಜೆಪಿ ನಾಯಕರು ಘೋಷಣೆ ಮಾಡಲಿ: ಡಿಕೆಶಿ ಸವಾಲು