ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಮುಖ ವ್ಯಕ್ತಿಗಳ ರಕ್ಷಣೆಗೆ ಬಿಜೆಪಿ ಸರ್ಕಾರಕ್ಕೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಐದು ಆಗ್ರಹಗಳನ್ನು ಮುಂದಿಟ್ಟಿದೆ. ಈ ವಿಚಾರವಾಗಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯುತ್ತಾ ಈ ಕೆಳಗಿನ ಆಗ್ರಹಗಳನ್ನು ಮಾಡಿದರು.
1. ಪಿಎಸ್ಐ ಅಕ್ರಮ ಪ್ರಕರಣದ ತನಿಖೆಯನ್ನು ಕಲ್ಬುರ್ಗಿಯ ಒಂದು ಪರಿಕ್ಷಾ ಕೇಂದ್ರದ ಅಕ್ರಮಕ್ಕೆ ಮಾತ್ರ ಸೀಮಿತಗೊಳಿಸಿದ್ದು, ರಾಜ್ಯದ ಇತರ ಕೇಂದ್ರಗಳಲ್ಲಿನ ಅಕ್ರಮದ ಕುರಿತು ತನಿಖೆ ಯಾವಾಗ? ಅದಕ್ಕೆ ಕಾಲಮಿತಿ ಏನು? ರಾಜ್ಯದ ಇತರ ಭಾಗಗಳಲ್ಲಿ ನಡೆದಿರುವ ಅಕ್ರಮದ ತನಿಖೆಯೂ ತ್ವರಿತಗತಿಯಲ್ಲಿ ಆಗಬೇಕು.
2. ಅನ್ನಪೂರ್ಣೇಶ್ವರಿ ನಗರದಲ್ಲಿ ದಾಖಲಾಗಿರುವ ದೂರಿನ ಪ್ರತಿಯನ್ನೇ ಮುಚ್ಚಿಹಾಕಿ ಪ್ರಕರಣವನ್ನೇ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಹಗರಣದ ತನಿಖೆ ವಿಳಂಬ ಹಾಗೂ ಮುಚ್ಚಿಹಾಕುವ ಪ್ರಯತ್ನವನ್ನು ನಿಲ್ಲಿಸಬೇಕು.
3. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.
4. ಎಡಿಜಿಪಿ ಅಮೃತ್ ಪಾಲ್ ಅವರ ಹೇಳಿಕೆಯನ್ನು ಸೆಕ್ಷನ್ 164 ಪ್ರಕಾರ ನ್ಯಾಯಾಲಯದ ಮುಂದೆ ದಾಖಲಿಸಿಕೊಳ್ಳಬೇಕು.
5. ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಎಸ್ಡಿಎ, ಎಫ್ಡಿಎ, ಪಿಡಬ್ಲ್ಯೂಡಿ, ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಅಕ್ರಮದ ಕುರಿತು ಕೂಡಲೇ ತನಿಖೆ ಆಗಬೇಕು. ಈ ಸರ್ಕಾರ ಬಂದ ನಂತರ ಆಗಿರುವ ಎಲ್ಲ ನೇಮಕಾತಿ ಪ್ರಕ್ರಿಯೆಗಳ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಅಲ್ಲದೇ 300 ಜನ ಅಭ್ಯರ್ಥಿಗಳಲ್ಲಿ ಎಷ್ಟು ಜನರನ್ನು ವಿಚಾರಣೆ ಮಾಡಲಾಗಿದೆ. ಕೆಲವರನ್ನು ಬಂಧಿಸಿ ಸರ್ಕಾರ ಬೆನ್ನು ತಟ್ಟಿ ಕೊಳ್ಳುತ್ತಿದೆ. ಆದರೆ, ಕೆಲವು ಅಧಿಕಾರಿಗಳ ಬೆರಳಚ್ಚು, ಮಾದರಿ ಸಹಿ ಪರೀಕ್ಷೆಯನ್ನು ಮಡಿವಾಳದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಪರಿಕ್ಷಾ ವರದಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ತನಿಖೆ ಯಾಕೆ ಇಷ್ಟು ವಿಳಂಬವಾಗಿದೆ? ಎಂದು ಕೇಳಿದ್ದಾರೆ.
ಯತ್ನಾಳ್ ವಿಚಾರಣೆ ಯಾವಾಗ? : ಪಿಎಸ್ಐ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಮಗ ಕೈವಾಡವಿದೆ. ಈ ಅಕ್ರಮದಲ್ಲಿ ನಡೆದಿರುವ ಅವ್ಯವಹಾರದ ಸಂಪೂರ್ಣ ದಾಖಲೆ ನನ್ನ ಬಳಿ ಇದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಅವರು ಹೇಳಿದ್ದಾರೆ. ಸರ್ಕಾರದ ವಿರುದ್ಧ ನೇರವಾಗಿ ಹಾಗೂ ಬಹಿರಂಗವಾಗಿ ಆರೋಪ ಮಾಡುತ್ತಿರುವ ಯತ್ನಾಳ್ ಅವರ ವಿಚಾರಣೆಯನ್ನು ಯಾವಾಗ ಮಾಡುತ್ತಾರೆ? ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂವಹನ ವಿಭಾಗದ ಸಹ ಮುಖ್ಯಸ್ಥರಾದ ಮನ್ಸೂರ್ ಖಾನ್, ಉಪಾಧ್ಯಕ್ಷರಾದ ರಮೇಶ್ ಬಾಬು, ಮಾಜಿ ಮೇಯರ್ ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಪಿಎಸ್ಐ ನೇಮಕ ಅಕ್ರಮ ಬೆನ್ನಲ್ಲೇ ಪ್ರಾಥಮಿಕ - ಪ್ರೌಢ ಶಿಕ್ಷಕರ ನೇಮಕಾತಿಯಲ್ಲೂ ಅಕ್ರಮದ ಆರೋಪ