ಬೆಂಗಳೂರು: ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರವನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮೊದಲು ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿದೆ.
ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓ.ಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಸಾರ್ವಜನಿಕ ಹಿತದ ವಿಷಯಗಳಲ್ಲಿ ನ್ಯಾಯಾಲಯದಿಂದ ಆದೇಶ ಕೋರುವ ಮೊದಲು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಬೇಕು ಎಂದು 1974ರಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿದೆ ಹೇಳಿದೆ. ಆ ಪ್ರಕಾರ ಅರ್ಜಿದಾರರು ತಮ್ಮ ಬೇಡಿಕೆಗೆ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿಲ್ಲ. ಆದ್ದರಿಂದ ಈ ಹಂತದಲ್ಲಿ ನ್ಯಾಯಾಲಯ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ. ಆದರೆ, ಅರ್ಜಿದಾರರು ತಮ್ಮ ಬೇಡಿಕೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಅಥವಾ ಕೇಂದ್ರವೇ ಈ ಅರ್ಜಿಯನ್ನು ಮನವಿಯನ್ನಾಗಿ ಪರಿಗಣಿಸಬಹುದು.
ಅರ್ಜಿದಾರರು ಸಲ್ಲಿಸುವ ಮನವಿಯನ್ನು ಕೇಂದ್ರ ಸರ್ಕಾರ ಕಾಲಮಿತಿಯೊಳಗೆ ಪರಿಗಣಿಸದಿದ್ದರೆ, ಇದೇ ಬೇಡಿಕೆಗೆ ಸಂಬಂಧಿಸಿದ ಹೊಸ ಅರ್ಜಿಯನ್ನು ಮುಂದಿನ ದಿನಗಳಲ್ಲಿ ಅರ್ಜಿದಾರರು ಸಲ್ಲಿಸಬಹುದು ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.
ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಅರ್ಜಿದಾರರು ಮನವಿ ಸಲ್ಲಿಸಿದಲ್ಲಿ ಅದನ್ನು ಮೂರು ತಿಂಗಳಲ್ಲಿ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದರು.