ಬೆಂಗಳೂರು: ಖಾಸಗಿ ವಾಹನ ಚಾಲಕರ ಬೆಂಗಳೂರು ಬಂದ್ ರಾಜಕೀಯ ಪ್ರೇರಿತವಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಖಾಸಗಿ ವಾಹನದವರು ಎಲ್ಲರೂ ಬಂದು ಹೋರಾಟ ಮಾಡುವ ಅವಶ್ಯಕತೆ ಇಲ್ಲ. ಖಾಸಗಿ ಬಸ್ನವರಿಗೆ ತೊಂದರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಮ್ಮ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಅವಕಾಶ ನೀಡುರುವುದರಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ಹೇಳಿದರು.
ಆದರೆ ಈ ಹೋರಾಟದಲ್ಲಿ ಓಲಾ, ಉಬರ್ ಕಾರು, ಆಟೋದವರು ಪ್ರತಿಭಟನೆ ಮಾಡುತ್ತಿರುವುದರ ಹಿಂದೆ ರಾಜಕೀಯ ಪ್ರೇರಣೆ ಇದ್ದಂತೆ ಕಾಣುತ್ತಿದೆ. ನಮಗೆ ಅವರ ಬಗ್ಗೆ ಅನುಕಂಪ ಇದೆ. ಅವರಿಗೆ ಏನಾದರು ಸಮಸ್ಯೆ ಇದ್ದರೆ ನಾವು ಅದನ್ನು ಬಗೆಹರಿಸುವ ಅಲೋಚನೆ ಇದೆ ಎಂದು ತಿಳಿಸಿದರು.
ಹೋರಾಟದ ಹೆಸರಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಪ್ರಯಾಣಿಕರಿಗೆ ಈ ರೀತಿ ತೊಂದರೆ ಮಾಡುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಸರ್ಕಾರ ಅವರ ಬೇಡಿಕೆಗಳನ್ನು ಗಮನಿಸುತ್ತದೆ. ಯಾವ ರೀತಿ ಖಾಸಗಿ ವಾಹನದವರಿಗೆ ಸಹಾಯ ಮಾಡಬೇಕು ಎಂಬ ಬಗ್ಗೆ ಆಲೋಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಶಕ್ತಿ ಯೋಜನೆ, ತೆರಿಗೆ ಏರಿಕೆ, ರ‍್ಯಾಪಿಡೋ ಬೈಕ್ ವಿರೋಧಿಸಿ ಬೆಂಗಳೂರಲ್ಲಿ ಖಾಸಗಿ ವಾಹನ ಚಾಲಕರ ಒಕ್ಕೂಟ ಬಂದ್ ನಡೆಸಿದೆ. ನಗರದ ಹಲವೆಡೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಕೆಲ ಪ್ರತಿಭಟನಾಕಾರರು ರ‍್ಯಾಪಿಡೋ ವಾಹನ ಸವಾರರು, ವಾಹನ ಚಲಾಯಿಸುತ್ತಿರುವ ಯೆಲ್ಲೋ ಬೋರ್ಡ್ ವಾಹನ ಚಾಲಕರ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಇದನ್ನೂ ಓದಿ : ಅರೆಬೆಂದ 'ಶಕ್ತಿ' ಯೋಜನೆ ಖಾಸಗಿ ಸಂಚಾರ ವ್ಯವಸ್ಥೆಯನ್ನೇ ಬುಡಮೇಲಾಗಿಸಿದೆ: ಹೆಚ್ಡಿಕೆ ಆಕ್ರೋಶ