ಬೆಂಗಳೂರು: ತೆರಿಗೆ ವಿನಾಯಿತಿ ಸೇರಿದಂತೆ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಟನೆಗಳ ವತಿಯಿಂದ ಜಂಟಿಯಾಗಿ ಮೌರ್ಯ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು.
20ಕ್ಕೂ ಅಧಿಕ ಖಾಸಗಿ ಸಾರಿಗೆ ಸಂಸ್ಥೆಗಳು ಒಂದೇ ವೇದಿಕೆಯಡಿ ಸರ್ಕಾರದ ಗಮನ ಸೆಳೆದರು. ಕೊರೊನಾ ಹೊಡೆತಕ್ಕೆ ಮಕಾಡೆ ಮಲಗಿರುವ ಖಾಸಗಿ ಸಾರಿಗೆ ಸಂಸ್ಥೆಗಳು ಚೇತರಿಸಿಕೊಳ್ಳಲು ಇನ್ನೊಂದು ವರ್ಷ ಬೇಕಾಗುತ್ತದೆ. ಪ್ರಯಾಣಿಕರು- ಪ್ರವಾಸಿಗರು ಖಾಸಗಿ ವಾಹನಗಳ ಮಾಲೀಕರು, ಚಾಲಕರು ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.
ಹಲವು ರಾಜ್ಯದಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ನಮ್ಮ ರಾಜ್ಯ ಸರ್ಕಾರವೂ ತೆರಿಗೆ ವಿನಾಯಿತಿ ನೀಡಬೇಕು. ಇದರಿಂದ ಚೇತರಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಓಟಿಯು ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮನವಿ ಮಾಡಿಕೊಂಡರು.