ಬೆಂಗಳೂರು:ಕೇಂದ್ರದ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಬೆದರಿಕೆ ಕರೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಕೈದಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು. ಕೋರಮಂಗಲದ ಕೆ.ಎಸ್.ಆರ್.ಪಿ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಕೂಟ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಸಚಿವರು ಬೆಳಗಾವಿ ಹಿಂಡಲಗಾ ಜೈಲಿನಿಂದ ನಾಗ್ಪುರದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಜ.14ರಂದು ಬೆದರಿಕೆ ಕರೆ ಹೋಗಿತ್ತು.
ಆ ಪ್ರಕರಣದಲ್ಲಿ ಒಬ್ಬ ಕೈದಿಯನ್ನು ವಶಕ್ಕೆ ಪಡೆಯಲಾಗಿದೆ. ಕೈದಿಗೆ ಮೊಬೈಲ್ ಕೊಟ್ಟಿದ್ದು ಯಾರು ? ನಂಬರ್ ಹೇಗೆ ಸಿಕ್ಕಿತ್ತು ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರಾಜ್ಯದಲ್ಲಿಯೂ ಆತನ ವಿರುದ್ಧ ಕೂಡ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಗೃಹಸಚಿವರು ವಿವರಿಸಿದರು.
ಕೇಂದ್ರ ಸಚಿವ ಗಡ್ಕರಿ ಕಚೇರಿಗೆ ಬೆದರಿಕೆ ಕರೆ: ಜೈಲಿನಲ್ಲಿ ಇದ್ದುಕೊಂಡೇ ಕೇಂದ್ರ ಸಚಿವ ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿ ಜಯೇಶ್ ಪೂಜಾರಿ ಎಂಬಾತ ಭೂಗತ ಪಾತಕಿ ದಾವುದ್ ಇಬ್ರಾಹಿಂ ತಂಡದ ಸದಸ್ಯನಾಗಿದ್ದು, 100 ಕೋಟಿ ರೂಪಾಯಿ ನೀಡದಿದ್ದರೆ ಕಚೇರಿಯನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದನು.
ಜೈಲರ್ಗಳಿಗೆ ನೋಟಿಸ್ ಜಾರಿ:ಆದರೆ ತಾನು ಕರೆ ಮಾಡಿ ಜೀವ ಬೆದರಿಕೆ ಹಾಕಿಲ್ಲ ಎಂದು ತನ್ನ ಮೇಲೆ ಬಂದಿರುವ ಆರೋಪವನ್ನೂ ಕೈದಿಯೂ ನಿರಾಕರಿಸಿದ್ದಾನೆ. ಬೆದರಿಕೆ ಕರೆ ಸಂಬಂಧ ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ನಾಲ್ವರು ಜೈಲರ್, ಇಬ್ಬರು ವಾರ್ಡನ್ ಗಳು ಸೇರಿ ಏಳು ಮಂದಿಗೆ ನೊಟೀಸ್ ಜಾರಿ ಮಾಡಲಾಗಿದೆ. ಏಳು ಜನ ಮೂರು ದಿನದೊಳಗೆ ಉತ್ತರಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸ್ಯಾಂಟ್ರೋ ರವಿ ಪ್ರಕರಣ ತನಿಖೆಗೆ ಆದೇಶ:ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ ಅವರು, ಸದ್ಯ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇರೆ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಸ್ಯಾಂಟ್ರೋ ರವಿ ವಿರುದ್ದ ಏನೇ ಆರೋಪವಿದ್ದರೂ ಮಾಹಿತಿ ಕೊಡಿ. ಎಲ್ಲವನ್ನೂ ತನಿಖೆ ಮಾಡುವಂತೆ ಸೂಚಿಸಿದ್ದೇವೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪ್ರತಿಪಕ್ಷದವರ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ:ಸ್ಯಾಂಟ್ರೋ ರವಿ ಪ್ರಕರಣ ಮುಚ್ಚಿ ಹಾಕಲು ಸಿಐಡಿ ವರ್ಗಾವಣೆ ಮಾಡಿರುವ ಕುರಿತಾದ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ಏನೇನೂ ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರ ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಿಎಸ್ಐ ಅಕ್ರಮ ನೇಮಕಾತಿಯ ಕೇಸ್ ಅನ್ನು ತನಿಖೆ ಮಾಡಿದ್ದ ತಂಡವೂ ಸ್ಯಾಂಟ್ರೋ ರವಿ ಪ್ರಕರಣವನ್ನೂ ತನಿಖೆ ಮಾಡ್ತಿದೆ. ನಿಷ್ಪಕ್ಷಪಾತವಾಗಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ತನಿಖಾ ಸಂಸ್ಥೆಗಳಿಗೆ ಪತ್ರಕರ್ತರು ಸುದ್ದಿಮೂಲ ತಿಳಿಸಲೇಬೇಕು: ಸಿಬಿಐ ವಿಶೇಷ ನ್ಯಾಯಾಲಯದ ಆದೇಶ