ಬೆಂಗಳೂರು: ಆರು ವರ್ಷದ ನಂತರ ಕೆಎಸ್ಆರ್ಟಿಸಿಯಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬೆಂಗಳೂರಿನ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹೊಸದಾಗಿ ನೇಮಕಗೊಂಡಿರುವ 264 ತಾಂತ್ರಿಕ ಸಹಾಯಕ ಹುದ್ದೆಯ ಅಭ್ಯರ್ಥಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇಮಕಾತಿ ಆದೇಶ ಪತ್ರ ನೀಡಿದ ಬಳಿಕ ಅವರು ಮಾತನಾಡಿದರು.
ನೇಮಕಾತಿಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಿ, ಅಭ್ಯರ್ಥಿಗಳಿಗೆ ಅವರಿಚ್ಛೆಯಂತೆ ಘಟಕಗಳನ್ನು ಸಹ ಆರಿಸಿಕೊಳ್ಳಲು ಗಣಕೀಕರಣದ ಮೂಲಕ ಅವಕಾಶ ಕಲ್ಪಿಸಲಾಗಿದೆ. ನೇಮಕಗೊಂಡಿರುವ ಸಿಬ್ಬಂದಿ ಶ್ರಮವಹಿಸಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿಗಮಕ್ಕೆ ಕೀರ್ತಿ ತರುವಂತೆ ಸಲಹೆ ನೀಡಿದರು.
ನೇಮಕಾತಿ ಪ್ರಕ್ರಿಯೆ: ಸರ್ಕಾರದ ಅನುಮತಿ ನಂತರ 300 ಹುದ್ದೆಗಳ ನೇಮಕಾತಿಗೆ ನಿಗಮದ ವಿಶೇಷ ನಿರ್ದೇಶಕ ಮಂಡಳಿ ಅನುಮೋದನೆ ಪಡೆದು ಅಧಿಸೂಚನೆ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ಮೀಸಲಾತಿ ನಿಯಮಗಳ ಅನ್ವಯ ವರ್ಗವಾರು ಹುದ್ದೆಗಳ ಸಂಖ್ಯೆಯನ್ನು ವಿಂಗಡಣೆ ಮಾಡಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿತು.
ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಮತ್ತು ದೇಹದಾರ್ಢ್ಯತೆ ಪರಿಶೀಲನೆಯನ್ನು 26-12-2023 ರಿಂದ 28-12-2023 ರ ವರೆಗೆ ಹಾಗೂ ಹೆಚ್ಚುವರಿಯಾಗಿ (ಗೈರುಹಾಜರಾದ ಅಭ್ಯರ್ಥಿಗಳಿಗೆ) 03-01-2024 ರಂದು ನಡೆಸಲಾಗಿದೆ.
05-01-2024 ರಂದು 264 ಆಯ್ಕೆಯಾದ ಅಭ್ಯರ್ಥಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಸಲ್ಲಿಸಿಲು 7 ದಿನಗಳ ಕಾಲಾವಕಾಶ ನೀಡಲಾಗಿತು. ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅರ್ಹ ಆಕ್ಷೇಪಣೆಗಳನ್ನು ಪುರಸ್ಕರಿಸಿ ಅಂತಿಮವಾಗಿ 13-01-2024 ರಂದು 264 ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.
17.01.2024 ರಂದು ಮೆರಿಟ್ ಕಂ ರೊಸ್ಟರ್ ಆಧಾರದ ಮೇಲೆ ನೇರವಾಗಿ ಅವರ ಆಯ್ಕೆಯ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ. ಇದೇ ಪ್ರಪ್ರಥಮ ಬಾರಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗಣಕೀಕೃತ ಕೌನ್ಸ್ಲಿಂಗ್ ಮೂಲಕ ನೇರವಾಗಿ ಘಟಕಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟು ಸ್ಥಳ ನಿಯೋಜನೆಯಲ್ಲಿ ಸಂಪೂರ್ಣ ಪಾರದರ್ಶಕತೆ ಅನುಸರಿಸಲಾಗಿದೆ.
ತಾಂತ್ರಿಕ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು 3 ತಿಂಗಳ ಒಳಗಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಅಧಿಸೂಚನೆ ಸಂದರ್ಭದಲ್ಲಿ ನಿಗದಿಪಡಿಸಲಾಗಿದ್ದ 02 ವರ್ಷಗಳ ತರಬೇತಿ ಅವಧಿಯನ್ನು 01 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಮಾಹೆಯಾನ ನಿಗದಿಪಡಿಸಿದ್ದ ತರಬೇತಿ ಭತ್ಯೆಯನ್ನು ರೂ.9,100/- ರಿಂದ ರೂ.14,000/- ಕ್ಕೆ ಏರಿಕೆ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಕೆಎಸ್ಆರ್ಟಿಸಿ 2000 ಚಾಲಕ ಕಂ ನಿರ್ವಾಹಕ ಹುದ್ದೆಯ ನೇಮಕಾತಿ ಸದ್ಯದಲ್ಲಿ ಚಾಲನಾ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಕೆಎಸ್ಆರ್ಟಿಸಿ ಅಧಿಕಾರಿಗಳು ಸ್ಪಷ್ಟ ಪಡಿಸಿದರು. ಸಮಾರಂಭದಲ್ಲಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿರ್ದೇಶಕಿ ಡಾ. ನಂದಿನಿ ದೇವಿ ಕೆ ಹಾಗೂ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಇದನ್ನೂಓದಿ:ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯ ಕುರಿತು ಸಾರ್ವಜನಿಕ ಚರ್ಚೆಗೆ ಸಿದ್ಧ : ಸಿಎಂ ಸಿದ್ದರಾಮಯ್ಯ