ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರುನಾಮಕರಣ ಮಾಡಿ ಆದೇಶಿಸಲಾಗಿದೆ. 12ನೇ ತರಗತಿವರೆಗಿನ ಶಿಕ್ಷಣ ಶಾಲಾ ಶಿಕ್ಷಣ ವ್ಯಾಪ್ತಿಗೆ ಒಳಪಡುತ್ತದೆ ಎಂಬುದನ್ನು 'ರಾಷ್ಟ್ರೀಯ ಶಿಕ್ಷಣ ನೀತಿ-2020'ರಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಮರುನಾಮಕರಣ ಮಾಡಲಾಗಿದೆ.
ಆದೇಶದಲ್ಲಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ 12ನೇ ತರಗತಿಯವರೆಗಿನ ಶಿಕ್ಷಣವು ಶಾಲಾ ಶಿಕ್ಷಣದ ವ್ಯಾಪ್ತಿಗೊಳಪಡುತ್ತದೆ. 'ರಾಷ್ಟ್ರೀಯ ಶಿಕ್ಷಣ ನೀತಿ-2020'ರಲ್ಲಿಯೂ ಸಹ ಈ ಅಂಶವನ್ನು ಪುನರುಚ್ಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ (ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ) ಪದನಾಮವನ್ನು ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾಯಿಸುವುದು ಸೂಕ್ತ ಎಂದು ವಿವಿಧ ಹಂತದ ಚರ್ಚೆಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದರು.
ಈಗಾಗಲೇ ಕೇಂದ್ರ ಸರ್ಕಾರ ಹಾಗೂ ಹೆಚ್ಚಿನ ರಾಜ್ಯಗಳಲ್ಲಿ 'ಶಾಲಾ ಶಿಕ್ಷಣ ಇಲಾಖೆ' ಎಂಬ ಪದನಾಮ ರೂಢಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದಲ್ಲಿಯೂ ಸಹ ಇದೇ ಮಾದರಿಯನ್ನು ಅಳವಡಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚಿಸಿದ್ದರು. ಈ ಪುಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ)ಯ ಅಭಿಪ್ರಾಯವನ್ನು ಪಡೆಯಲಾಗಿದೆ. ಇದನ್ನು ಪರಿಗಣಿಸಿ ಮರುನಾಮಕರಣ ನಡೆದಿದೆ.
ಇದನ್ನೂ ಓದಿ: ನೈರುತ್ಯ ಮುಂಗಾರು ಕ್ಷೀಣ.. ರಾಜ್ಯದಲ್ಲಿ ಎದುರಾಯ್ತು ಮಳೆ ಕೊರತೆ