ಬೆಂಗಳೂರು: ಇದೇ ತಿಂಗಳ 19ರಿಂದ ಸೆಪ್ಟಂಬರ್ 8ರವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ನನಗೆ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಇಂದು ಪ್ರಚಾರ ಸಮಿತಿ ಕಾರ್ಯಾಲಯವನ್ನು ಸಹ ಆರಂಭಿಸಿದ್ದೇವೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಿದ್ದು, ಪದಾಧಿಕಾರಿಗಳ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದೇವೆ. ಇನ್ನೊಂದು ವಾರದಲ್ಲಿ ಅಧಿಕೃತ ಪಟ್ಟಿ ಪ್ರಕಟವಾಗಲಿದೆ ಎಂದರು.
ಕ್ರಿಯಾಶೀಲರಾಗಿರುವ ಅನೇಕರಿಗೆ ಉಪಾಧ್ಯಕ್ಷ ಸ್ಥಾನ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನದ ಜವಾಬ್ದಾರಿ ನೀಡಿದ್ದೇವೆ. ಪ್ರಚಾರ ಹಾಗೂ ಮಾಧ್ಯಮ ವಿಭಾಗಕ್ಕೂ ಸಹ ಪ್ರತ್ಯೇಕ ಸಮಿತಿಗಳನ್ನು ಮಾಡಲಿದ್ದೇವೆ. ಇನ್ನೆರಡು ದಿನಗಳಲ್ಲಿ ಮೊದಲ ಹಂತದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಪ್ರವಾಸದ ವಿವರ: ಆಗಸ್ಟ್ 19ರಂದು ಕಲಬುರಗಿಯಿಂದ ಪ್ರವಾಸ ಆರಂಭವಾಗಲಿದೆ. 20ರಂದು ಹುಬ್ಬಳ್ಳಿ, ಧಾರವಾಡ, ಅಂದು ಸಂಜೆ ಕಾರವಾರ, ಆ. 21, 22 ದಾವಣಗೆರೆ ಆ. 23 ಚಿತ್ರದುರ್ಗ ಆ.24 ಶಿವಮೊಗ್ಗ, 26ಕ್ಕೆ ಮೈಸೂರು, 27ಕ್ಕೆ ಚಾಮರಾಜನಗರ, ಆ 29 ತುಮಕೂರು, ಸೆಪ್ಟೆಂಬರ್ 1 ರಂದು ಮಂಗಳೂರು, 2ರಂದು ಉಡುಪಿ, 3ರಂದು ತುಮಕೂರು, 5ರಂದು ಕೊಪ್ಪಳ, 6ರಂದು ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆ, 7 ರಂದು ರಾಯಚೂರಿನಲ್ಲಿ ಸಭೆ ನಡೆಯಲಿದೆ. ಉಳಿದ ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಭೇಟಿ ನೀಡಲಿದ್ದೇನೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಯಾವ ರೀತಿ ಭ್ರಷ್ಟಾಚಾರ ನಡೆಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅಕ್ರಮದ ಮೂಲಕವೇ ಅಧಿಕಾರಕ್ಕೆ ಬಂದಿರುವ ಬಿಜೆಪಿ 40 ಪರ್ಸೆಂಟ್ ಕಮಿಷನ್ ದಂಧೆ ನಡೆಸಿದೆ. ಪಿಎಸ್ಐ ನೇಮಕದಲ್ಲಿ ಅಕ್ರಮ ನಡೆದಿದೆ. ಭ್ರಷ್ಟಾಚಾರದಲ್ಲಿ ಕರ್ನಾಟಕ ಮಾದರಿಯಾಗಿದೆ. ಇಂದು ಮುಖ್ಯಮಂತ್ರಿ ರಾಜೀನಾಮೆಗೆ ಅವರ ಸಂಪುಟ ಸದಸ್ಯರೇ ಒತ್ತಾಯಿಸುವ ದಿನ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಸಭೆಯಲ್ಲಿ ಚರ್ಚಿಸಿದ ವಿಷಯಗಳಿವು: ನಮ್ಮ ಅಧಿಕಾರ ಇದ್ದಾಗ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಿದ್ದೆವು. ಆದರೆ ಇಂದು ಉತ್ತರ ಪ್ರದೇಶ ಮಾದರಿ ಆಡಳಿತದ ಮಾತು ಕೇಳಿ ಬರುತ್ತಿದೆ. ನಾವೇ ಇತರರಿಗೆ ಮಾದರಿಯಾಗುವ ಪ್ರಯತ್ನ ಮಾಡುತ್ತಿಲ್ಲ. ಎಲ್ಲ ಮಹನೀಯರ ಇತಿಹಾಸವನ್ನು ತಿರುಚುವ ಪ್ರಯತ್ನವನ್ನು ಈ ರಾಜ್ಯ ಸರ್ಕಾರ ಮಾಡುತ್ತಿದೆ. ದೇಶಕ್ಕಾಗಿ ತ್ಯಾಗ ಮಾಡಿದವರನ್ನು ಅವಹೇಳನ ಮಾಡಲಾಗುತ್ತಿದೆ. ಇದು ಅಲ್ಲದೆ ಇನ್ನೂ ಹಲವು ವಿಚಾರಗಳನ್ನು ನಾವು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಎಂದು ಎಂ ಬಿ ಪಾಟೀಲ್ ಹೇಳಿದರು.
ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲ: ರಣದೀಪ್ ಸಿಂಗ್ ಸುರ್ಜೇವಾಲಾ
ಪ್ರಣಾಳಿಕೆ ಸಮಿತಿ ಸಹ ತನ್ನ ಕಾರ್ಯವನ್ನು ಆರಂಭಿಸಿದೆ. ಮತ್ತೆ ರಾಜ್ಯ ನಾಯಕರು ನಮಗೆ ಸಲಹೆ ನೀಡುವ ಹಾಗೂ ಪ್ರಣಾಳಿಕೆ ಸಮಿತಿಗೆ ಮಾರ್ಗದರ್ಶನ ನೀಡುವ ಕಾರ್ಯ ಮಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯ ಬಳಿಕ ರಾಜ್ಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗ ನಾನೊಬ್ಬನೇ ಪ್ರವಾಸ ಕೈಗೊಳ್ಳಲಿದ್ದು, ಆಯಾ ಜಿಲ್ಲೆಯ ಕಾಂಗ್ರೆಸ್ ನಾಯಕರು ತಮಗೆ ಸಾಥ್ ನೀಡಲಿದ್ದಾರೆ ಎಂದರು.