ಮಹದೇವಪುರ (ಬೆಂಗಳೂರು): ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿಸಿದ ರಿಪಬ್ಲಿಕ್ ಸೇನಾ ಪಾರ್ಟಿಯಿಂದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಮಾರ್ಗದರ್ಶನದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತದೆ ಎಂದು ಮೂಲ ಅನುಸೂಚಿತ ಜಾತಿಗಳ ಐಕ್ಯತಾ ಸಮಿತಿ ರಾಜ್ಯಾಧ್ಯಕ್ಷ ಬಿ.ಕೃಷ್ಣಪ್ಪ ತಿಳಿಸಿದ್ದಾರೆ.
ಮಹದೇವಪುರ ಕ್ಷೇತ್ರದ ಓಫಾರಂ ಸರ್ಕಲ್ ಬಳಿ ಇರುವ ತಲಸಿರಿ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಕೆಆರ್ಎಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವುದರಿಂದ ಕರ್ನಾಟಕ ರಿಪಬ್ಲಿಕ್ ಸೇನೆಯು ತಮ್ಮ ಕಾರ್ಯಕರ್ತರನ್ನು ಕಣಕ್ಕಿಳಿಸಲು ಸಜ್ಜುಗೊಳಿಸುತ್ತಿದೆ. ಜಿಗಣಿ ಶಂಕರ್ ನೇತೃತ್ವದಲ್ಲಿ ಮುಂಬರುವ ಚುನಾವಣಾ ಪೂರ್ವಭಾವಿ ಸಭೆಯನ್ನು ನಡೆಸಲಾಗುವುದು. ಮುಂಬರುವ ಚುನಾವಣೆಯಲ್ಲಿ ಕೆಆರ್ಎಸ್ ಪಕ್ಷದಿಂದ ಎಲ್ಲ ವಾರ್ಡ್ಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಮತದಾರರು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ನಂತರ ಮಾತನಾಡಿದ ಕೆಆರ್ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಳತೂರು ವೆಂಕಟೇಶ್, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ವಾರ್ಡ್ ಮಾತ್ರವೇ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಆ ಎರಡೂ ಕ್ಷೇತ್ರಗಳಿಗೆ ಹಾಗೂ ಜನರಲ್ ಮೀಸಲಾತಿ ಇರುವ ವಾರ್ಡ್ಗಳಿಗೂ ಸಹ ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಕೆಆರ್ಎಸ್ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಉತ್ತಮ ಅನುಭವ ಹೊಂದಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬರಲಿದೆ ಎಂದರು.