ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧತೆ ಕುರಿತು ಪಕ್ಷದ ಸಂಘಟನೆ ಮತ್ತು ಕಾರ್ಯತಂತ್ರ ರೂಪಿಸುವ ಸಲುವಾಗಿ ನಾಳೆ ಬಿಜೆಪಿ ಹಿರಿಯ ನಾಯಕರ ಚಿಂತನಾ ಸಭೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಮಹತ್ವದ ಸಭೆ ನಡೆಸಿ, ನಾಳಿನ ಅಜೆಂಡಾ ಕುರಿತು ಚರ್ಚಿಸಲಾಗಿದೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಪ್ರಮುಖ ನಾಯಕರ ಮಹತ್ವದ ಸಭೆ ನಡೆಯಿತು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಪಾಲ್ಗೊಂಡಿದ್ದರು. ನಾಳಿನ ಚಿಂತನಾ ಸಭೆಯ ಸಿದ್ಧತೆ, ಚರ್ಚಿಸಬೇಕಾದ ವಿಷಯಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ಪಕ್ಷದ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಚಿವರು, ಪ್ರಮುಖರು ಸೇರಿ ಸಭೆ ನಡೆಸಿದ್ದೇವೆ. ನಾಳೆ ನಡೆಯುವ ಚಿಂತನಾ ಸಭೆಯ ಎಲ್ಲ ವಿಶೇಷಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸಂಘಟನೆ ವಿಚಾರ, ಪಕ್ಷವನ್ನ ಗಟ್ಟಿಗೊಳಿಸುವುದರ ಜೊತೆಗೆ ಚುನಾವಣೆಯನ್ನು ಹೇಗೆ ಎದುರಿಸಬೇಕು. ಬೇರೆ ಯಾವ ವಿಷಯ ನಾಳೆ ಪ್ರಸ್ತಾಪ ಮಾಡಬೇಕು ಎನ್ನುವ ಕುರಿತು ಕೆಲವು ತೀರ್ಮಾನಗಳನ್ನ ತೆಗೆದುಕೊಳ್ಳಲಾಯಿತು ಎಂದರು.
ನಾಳೆ ಬೆಳಗ್ಗೆ 9 ಗಂಟೆಗೆ ಚಿಂತನಾ ಸಭೆ ಆರಂಭವಾಗುತ್ತದೆ. ಅಜೆಂಡಾದಲ್ಲಿನ ವಿಷಯಗಳ ಹೊರತಾಗಿಯೂ ಕೂಡಾ ಬೇರೆ ಬೇರೆ ವಿಚಾರಗಳ ಬಗ್ಗೆ ಮುಕ್ತವಾದ ಚರ್ಚೆಗೆ ನಾವು ಅವಕಾಶ ಕೊಟ್ಟಿದ್ದೇವೆ. ಅದರಲ್ಲಿ ಕೋರ್ ಕಮಿಟಿ ಸದಸ್ಯರು, ಸಚಿವ ಸಂಪುಟ ಸದಸ್ಯರು, ಪಕ್ಷದ ಪ್ರಮುಖರು ಸೇರಿ ರಾಜ್ಯದ 50 ಕ್ಕೂ ಹೆಚ್ಚು ನಾಯಕರು ಇರಲಿದ್ದಾರೆ ಎಂದು ಹೇಳಿದರು.
ನಾಳಿನ ಸಭೆಯ ನಂತರ ನಮ್ಮ ಕಾರ್ಯಸೂಚಿ ಪ್ರಕಾರ, ಪಕ್ಷದ ಸಂಘಟನೆ ಕೈಗೆತ್ತಿಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ಹೇಗೆ ಮಾಡಬೇಕು, ಬರುವ ಚುನಾವಣೆಯನ್ನು ಹೇಗೆ ಎದುರಿಸಬೇಕು. ಇದರ ಬಗ್ಗೆ ಚರ್ಚೆಯನ್ನ ಮಾಡುತ್ತೇವೆ. ನಾಳೆ ಸಭೆ ಸಂಪೂರ್ಣವಾದ ಬಳಿಕ ಸಂಪೂರ್ಣ ವಿವರ ನೀಡುತ್ತೇವೆ ಎಂದರು.
ಖಾಸಗಿ ರೆಸಾರ್ಟ್ನಲ್ಲಿ ನಾಳೆ ಬಿಜೆಪಿ ಚಿಂತನಾ ಶಿಬಿರ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ನಾಳೆ ಬಿಜೆಪಿಯ ಚಿಂತನಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ಎಲ್ಲ ಸಚಿವರು, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯರು ಮತ್ತು ಬಿಜೆಪಿ ಪದಾಧಿಕಾರಿಗಳು ಸೇರಿದಂತೆ ಸುಮಾರು 60 ಜನ ಭಾಗಿಯಾಗಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಚಿಂತನಾ ಶಿಬಿರ ಆರಂಭಗೊಳ್ಳಲಿದೆ.
ಓದಿ: ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಶರಣಾಗಿದೆ, ಡಿಕೆಶಿ ರಬ್ಬರ್ ಸ್ಟಾಂಪ್: ನಾರಾಯಣಸ್ವಾಮಿ