ಬೆಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪೂರಕ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಪ್ರಮುಖ ಆರೋಪಿ ತುಫೈಲ್ ಎಂ ಎಚ್ ಹಾಗೂ ಮೊಹಮ್ಮದ್ ಜಬೀರ್ ವಿರುದ್ಧ್ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, ಒಟ್ಟು 21 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದಂತಾಗಿದೆ.
ಪ್ರಕರಣದ ಹಿನ್ನೆಲೆ: ಕಳೆದ ವರ್ಷ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಎಂಬವರ ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪ್ರವೀಣ್ ಬೈಕ್‌ನಲ್ಲಿ ಮನೆಗೆ ಹೊರಡಲು ಸಿದ್ದರಾಗಿದ್ದಾಗ ಬೈಕ್‌ನಲ್ಲಿ ಆಗಮಿಸಿದ ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರು ಮಾರ್ಗಮಧ್ಯೆದಲ್ಲೇ ಮೃತಪಟ್ಟಿದ್ದರು.
ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದರು. ಶಾಸಕ ಸಂಜೀವ ಮಠಂದೂರು, ಸಚಿವ ಎಸ್.ಅಂಗಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗಾಗಿ ಪೊಲೀಸ್ ಇಲಾಖೆಯು ವಿಶೇಷ ತಂಡಗಳನ್ನು ರಚಿಸಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ಕೊಲೆಗೆ ಸಹಕಾರ ನೀಡಿದ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು.
ಪೂರಕ ಚಾರ್ಜ್ಶೀಟ್ ಸಾರಾಂಶ : ಕೊಡಗು ಮೂಲದವನಾದ ತುಫೈಲ್ ಎಂ.ಎಚ್ ಪಿಎಫ್ಐ ಸರ್ವೀಸ್ ಟೀಂನ ಸಕ್ರಿಯ ಸದಸ್ಯನಾಗಿದ್ದು, ಮಾಸ್ಟರ್ ಟ್ರೈನರ್ ಆಗಿ ಗುರುತಿಸಿಕೊಂಡಿದ್ದ. ದಕ್ಷಿಣ ಕನ್ನಡದಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ನಲ್ಲಿ ಪಿಎಫ್ಐ ಸದಸ್ಯರಿಗೆ ಶಸ್ತ್ರಾಸ್ತ್ರ ಸೇರಿದಂತೆ ಸುಧಾರಿತ ತರಬೇತಿ ನೀಡುತ್ತಿದ್ದ. ಎನ್ಐಎ ತನಿಖೆಯ ಪ್ರಕಾರ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳಿಗೆ ಮೈಸೂರು, ಕೊಡಗು ಹಾಗೂ ತಮಿಳುನಾಡಿನ ಈರೋಡಿನಲ್ಲಿ ತುಫೈಲ್ ಆಶ್ರಯ ಕಲ್ಪಿಸಿಕೊಟ್ಟಿದ್ದ.
ಮೊಹಮ್ಮದ್ ಜಬೀರ್ ದಕ್ಷಿಣ ಕನ್ನಡ ಜಿಲ್ಲೆಯ ಪಿಎಫ್ಐ ಜಿಲ್ಲಾಧ್ಯಕ್ಷನಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿ ನಡೆದಿದ್ದ ಸಭೆಗಳಲ್ಲಿ ಭಾಗಿಯಾಗಿದ್ದ. ಮತ್ತು ಮಸೂದ್ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲಾಗುವುದು ಎಂದು ಪ್ರಚೋದನಕಾರಿ ಭಾಷಣಗಳನ್ನ ಮಾಡಿದ್ದ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಮೊದಲ ಚಾರ್ಜ್ಶೀಟ್ ಸಾರಾಂಶ: ತನಿಖಾ ಕಾಲದಲ್ಲಿ ಪಿಎಫ್ಐ ಸಂಘಟನೆಯು ಹಿಂದೂಗಳಲ್ಲಿ ಭಯವನ್ನುಂಟು ಮಾಡುವ ಮತ್ತು 2047ರ ವೇಳೆಗೆ ಇಸ್ಲಾಂ ಆಡಳಿತ ಜಾರಿಗೆ ತರುವ ಉದ್ದೇಶ ಹೊಂದಿದ್ದು, ಅದಕ್ಕಾಗಿಯೇ ತನ್ನದೇ ಆದ ಸರ್ವಿಸ್ ಟೀಂ / ಕಿಲ್ಲರ್ಸ್ ಸ್ಕ್ವಾಡ್ ಹೊಂದಿರುವುದು ಕಂಡು ಬಂದಿದೆ. ಸರ್ವಿಸ್ ಟೀಂನ ಸದಸ್ಯರು ಶಸ್ತ್ರಾಸ್ತ್ರ ತರಬೇತಿ ಹೊಂದಿದ್ದು, ಪಿಎಫ್ಐನ ಹಿರಿಯ ನಾಯಕರುಗಳ ಆಜ್ಞೆಯಂತೆ ಹತ್ಯೆ, ಹಲ್ಲೆಗಳನ್ನ ನಡೆಸುತ್ತಿದ್ದರು. ಅದರಂತೆ ನಾಲ್ವರನ್ನ ಗುರುತಿಸಲಾಗಿತ್ತು. ನಾಲ್ವರಲ್ಲಿ ಬಿಜೆಪಿಯ ಯುವ ಮೋರ್ಚಾದ ಜಿಲ್ಲಾ ಕಮಿಟಿ ಸದಸ್ಯ ಪ್ರವೀಣ್ ನೆಟ್ಟಾರುನನ್ನ 26 ಜುಲೈ 2022ರಂದು ಸಾರ್ವಜನಿಕರ ಕಣ್ಣೆದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲಾಯಿತು ಎಂದು ಎನ್ಐಎ ಜನವರಿ 20ರಂದು ಸಲ್ಲಿಸಿದ್ದ ತನ್ನ ಚಾರ್ಜ್ ಶೀಟಿನಲ್ಲಿ ಉಲ್ಲೇಖಿಸಿತ್ತು.
ಓದಿ: ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ ಪ್ರವೀಣ್ ನೆಟ್ಟಾರು ಕೊಲೆ ಆರೋಪಿ!