ಬೆಂಗಳೂರು: ಇತಿಹಾಸಪ್ರಸಿದ್ದ ಬೆಂಗಳೂರು ಕರಗವು ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳುವ ಸಂಪ್ರದಾಯವನ್ನು ಕೈಬಿಡಬೇಕು ಎಂದು ದೇವಸ್ಥಾನದ ಆಡಳಿತಕ್ಕೆ ಮನವಿ ಮಾಡಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತ, ಹಿಂದೂಪರ ಹೋರಾಟಗಾರ ಪ್ರಶಾಂತ್ ಸಂಬರಗಿ ತಿಳಿಸಿದ್ದಾರೆ. ಕರಗವು ದರ್ಗಾಕ್ಕೆ ಹೋಗಿಬರಬೇಕು ಎಂಬ ಸಂಪ್ರದಾಯವನ್ನು ಅನಗತ್ಯವಾಗಿ ಹೇರಲಾಗಿದೆ. ಈ ವರ್ಷ ಅಲ್ಲಿಗೆ ತೆರಳುವುದು ಬೇಡ ಎಂದು ಕೋರಿದ್ದೇವೆ ಎಂದರು.
ಸದ್ಯ ಧರ್ಮಯುದ್ಧ ನಡೆಯುತ್ತಿದ್ದು, ನಮ್ಮ ದೇವರು ನಮಗೆ ಸೀಮಿತವಾಗಿರಬೇಕು. ಕರಗ ತೆರಳುವುದಿಲ್ಲ ಎಂಬ ನಂಬಿಕೆ ಈಗಲೂ ಇದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಬಳಿ ಮಾತುಕತೆ ನಡೆಸಿದ್ದೇವೆ. ಅಗತ್ಯ ಬಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು ಕರಗ: ಬೆಂಗಳೂರು ಕರಗ ಸಾಮರಸ್ಯದ ಉತ್ಸವವಾಗಿದೆ. ಏಪ್ರಿಲ್ 16ರ ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ವೈಭವ ಜರುಗುತ್ತದೆ. ಈ ನಿಟ್ಟಿನಲ್ಲಿ ತಿಗಳರಪೇಟೆಯ ಧರ್ಮರಾಯ ದೇಗುಲದಲ್ಲಿ ಸಿದ್ಧತಾ ಕಾರ್ಯಗಳು ನಡೆದಿವೆ. ಏಪ್ರಿಲ್ 18 ವರೆಗೂ ಪ್ರತಿದಿನ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಕೋವಿಡ್ ಕಾರಣಕ್ಕೆ ಕಳೆದ 2 ವರ್ಷದಿಂದ ಕರಗವನ್ನು ಸರಳವಾಗಿ ಆಚರಿಸಲಾಗಿದೆ. ಈ ಬಾರಿ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ.
ಇದನ್ನೂ ಓದಿ: ಆದಿ ಜಾಂಬವ ಹರಿಜನ ವಿದ್ಯಾರ್ಥಿ ನಿಲಯದಲ್ಲಿ ಅಕ್ರಮ?: ಧ್ವನಿ ಎತ್ತಿದ ಕುಟುಂಬಕ್ಕೆ ಬಹಿಷ್ಕಾರ