ಬೆಂಗಳೂರು: ಪವಿತ್ರ ಆರ್ಥಿಕತೆ ಜಾರಿಗೆ ಆಗ್ರಹಿಸಿ ನಡೆಸುತ್ತಿದ್ದ ಎಂಟು ದಿನಗಳ ಉಪವಾಸ ವ್ರತದ ಬಳಿಕ ರಂಗಕರ್ಮಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಇಂದು ಉಪವಾಸ ಕೈಬಿಟ್ಟಿದ್ದಾರೆ. ಆದರೆ ಉಪವಾಸ ಕೈಬಿಟ್ಟರೂ, ಬಡವರು, ಕೂಲಿ ಕಾರ್ಮಿಕರ ಪರವಾದ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ಪ್ರಭುತ್ವವನ್ನು ಅಲುಗಾಡಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಅದು ನಮ್ಮ ಆತ್ಮವಲೋಕನವಾಗಿತ್ತು. ನಾನೂ ಮೊದಲ್ಗೊಂಡು ಹಲವು ಗಾಂಧಿವಾದಿಗಳು ರಚನಾತ್ಮಕ ಕಾರ್ಯಕರ್ತರು ಹಾಗೂ ಪ್ರಗತಿಪರ ಚಿಂತಕರು ಈ ಕೆಲವು ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದೇವೆ ಹಾಗೂ ನಾವೊಂದು ದೃಢನಿರ್ಧಾರಕ್ಕೆ ಬಂದಿದ್ದೇವೆ. ಲಾಕ್‍ಡೌನ್ ತೆರವುಗೊಂಡ ನಂತರದಲ್ಲಿ ಬೀದಿಗಿಳಿಯಲಿದ್ದೇವೆ, ಹಸಿದವರತ್ತ, ಕೆಲಸ ಕಳೆದುಕೊಂಡಿರುವವರತ್ತ ತೆರಳಲಿದ್ದೇವೆ. ಗುಳೆಎದ್ದ ಬಡವರಿರಲಿ, ಗ್ರಾಮೀಣ ರೈತನಿರಲಿ, ಪೇಟೆಯ ಕಾರ್ಮಿಕನಿರಲಿ, ನೇಕಾರ ಚಮ್ಮಾರ ಯಾರೇ ಇರಲಿ ಅವರ ಪರವಾದ ದನಿ ಎತ್ತುವವರಿದ್ದೇವೆ. ನಾವು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಬಡವರ ಪರವಾದ ಹೋರಾಟಗಳನ್ನು ಹೆಚ್ಚಿನ ದೃಡತೆಯಿಂದ ಮುನ್ನಡೆಸುವವರಿದ್ದೇವೆ" ಎಂದು ತಿಳಿಸಿದ್ದಾರೆ.
ಅಲ್ಲದೆ ಕುಸಿದು ಬಿದ್ದಿರುವ ರಾಕ್ಷಸ ಆರ್ಥಿಕತೆಯನ್ನು ಮತ್ತೆ ಮೇಲೆತ್ತುವ ಪ್ರಯತ್ನ ನಡೆಯುತ್ತಿದೆ. ಬಡವರು, ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುವ ರಾಕ್ಷಸ ಆರ್ಥಿಕತೆ ದೇಶಕ್ಕೆ ಬೇಡ. ಹಿಂಸೆ ಮುಂದುವರೆದರೆ, ಅವರ ವಿರುದ್ಧ ಅಹಿಂಸಾತ್ಮಕ ಯುದ್ಧ ಸಾರುತ್ತೇವೆ ಎಂದು ತಿಳಿಸಿದರು.