ಬೆಂಗಳೂರು : ಕೋವಿಡ್ ಆತಂಕದ ನಂತರ ಮಂಡನೆ ಆಗಿರುವ ಈ ಬಜೆಟ್ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಪ್ರಕಾಶ್ ಮಂಡೋತ್ ಅಭಿಪ್ರಾಯಪಟ್ಟಿದ್ದಾರೆ.
ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಈ ಬಜೆಟ್ನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದೆ. ರೈಲು, ರಸ್ತೆ, ಬಂದರು ಇನ್ನಿತರ ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕೃಷಿ, ಪ್ರವಾಸೋದ್ಯಮ, ಕೈಗಾರಿಕೆ ಎಲ್ಲರಿಗೂ ಅನುಕೂಲಕರವಾಗಿ ಮಂಡನೆಯಾಗಿದೆ ಎಂದರು.
ವೇಗವಾಗಿ ಸಾಗುವ ಹೊಸ ಸರಣಿಯ 400 ರೈಲುಗಳನ್ನು ಈ ಸಾರಿ ಪ್ರಕಟಿಸಲಾಗಿದೆ. 16 ಕೋಚ್ಗಳನ್ನು ಒಳಗೊಂಡಿರುವ ಈ ರೈಲು ಪ್ರತಿ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಮೊದಲು 75 ರೈಲನ್ನು ಘೋಷಿಸಲಾಗಿತ್ತು. ಈ ಸಾರಿ 400 ರೈಲುಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
2023ರಲ್ಲಿ ಇನ್ನೂ ಒಂದು ಹಂತದ ರೈಲುಗಳ ಆರಂಭವಾಗಲಿದೆ. 100 ಟರ್ಮಿನಲ್ಗಳ ನಿರ್ಮಾಣಕ್ಕೂ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ಉತ್ಪನ್ನ ಒಂದು ನಿಲ್ದಾಣ ಆರಂಭಿಸಲಾಗುತ್ತದೆ. ಎರಡು ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಇವೆಲ್ಲವನ್ನೂ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಕೈಗಾರಿಕೆಗಳ ಅನುಕೂಲಗಳಿಗೆ ಮತ್ತು ಲಾಜಿಸ್ಟಿಕ್ ಕ್ಷೇತ್ರಗಳ ಪ್ರಗತಿಗೆ ವಿನಿಯೋಗ ಆಗಲಿದೆ.
ಇದರಿಂದ ಮಾರುಕಟ್ಟೆ ಬೆಳೆಯಲಿದೆ ಮತ್ತು ತೆರಿಗೆ ರೂಪದಲ್ಲಿ ಆದಾಯ ಸರ್ಕಾರಕ್ಕೆ ಹರಿದು ಬರಲಿದೆ. 2025ಕ್ಕೆ 5 ಟ್ರಿಲಿಯನ್ ಎಕಾನಮಿ ಗುರಿಯ ಸಾಧನೆಗೆ ಮುಂದುವರೆಯುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಈ ಸಾರಿಯ ಬಜೆಟ್ ಮಂಡನೆ ಆಗಿದೆ ಎಂದರು.
ಮೇಲ್ನೋಟಕ್ಕೆ ಯಾವ ರಾಜ್ಯಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿ ಸಿಗುವುದಿಲ್ಲ. ಇಲಾಖೆವಾರು ಅನುದಾನಗಳ ಹಂಚಿಕೆ ಹಾಗೂ ಬಿಡುಗಡೆ ಆಗಿದೆ. ಹೀಗಾಗಿ, ಕರ್ನಾಟಕಕ್ಕೆ ಎಷ್ಟು ಅನುದಾನ ನೀಡಿಕೆ ಆಗಿದೆ ಅಥವಾ ಆದ್ಯತೆ ಎಷ್ಟರಮಟ್ಟಿಗೆ ಲಭಿಸಿದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಎಲ್ಲ ರಾಜ್ಯಗಳಿಗೂ ನೀಡಿದಂತೆ ನಮ್ಮ ರಾಜ್ಯಕ್ಕೂ ಉತ್ತಮ ಅನುದಾನ ಲಭಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ರೈಲ್ವೆ ಯೋಜನೆಗಳಿಗೆ ಸಂಬಂಧಿಸಿ ಹೇಳುವುದಾದರೆ, ಕಳೆದ ಕೆಲ ವರ್ಷಗಳಿಂದಲೂ ರಾಜ್ಯದ 8 ಯೋಜನೆಗಳು ಪ್ರಸ್ತಾವನೆ ಹಂತದಲ್ಲಿಯೇ ಇವೆ. ಇದಕ್ಕೆ ಉತ್ತಮ ಅನುದಾನ ಸಿಗುವ ನಿರೀಕ್ಷೆ ಇದೆ. ಹಳೆಯ ಹಾಗೂ ಪ್ರಮುಖ ರೈಲ್ವೆ ಮಾರ್ಗಗಳ ಯೋಜನೆ ಇದಾಗಿದೆ. ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಹೆಚ್ಚಿನ ಅನುದಾನ ಲಭಿಸಿದರೆ ರಾಜ್ಯದ ಅಭಿವೃದ್ಧಿ ಇನ್ನಷ್ಟು ಉತ್ತಮವಾಗಿ ಆಗಲಿದೆ.
ಕೇಂದ್ರ ಸರ್ಕಾರ ನೀಡಿದ ಮೊತ್ತದ ಅನುದಾನವನ್ನು ರಾಜ್ಯ ಸರ್ಕಾರ ಸಹ ನೀಡಬೇಕಾಗುತ್ತದೆ. ವಿದ್ಯುತ್ ಚಾಲಿತ ರೈಲುಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದೆ. ಈ ಸಾರಿ ಈ ಕಾರ್ಯಕ್ಕೆ ಒತ್ತು ಸಿಗುವ ನಿರೀಕ್ಷೆಯಿದೆ ಎಂದರು. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಬಹಳ ವರ್ಷದಿಂದಲೂ ಪ್ರಸ್ತಾವನೆ ಹಂತದಲ್ಲಿಯೇ ಇದೆ. ಪರಿಸರ ಸಂಬಂಧಿ ಸಮಸ್ಯೆಯಿಂದ ಇದು ನೆನಗುದಿಗೆ ಬಿದ್ದಿದೆ.
ಪರಿಸರ ಸಂರಕ್ಷಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರೆಡ್ಮಿ ಇಲಾಖೆ ಸಹ ತಾವು ರೈಲು ಮಾರ್ಗ ನಿರ್ಮಾಣ ಸಂದರ್ಭ ಕಡಿಯುವ ಮರಗಳ ಬದಲಿಗೆ ಒಂದಕ್ಕೆ ಮೂರು ಮರಗಳನ್ನು ನೆಡುವ ಭರವಸೆ ನೀಡಿದೆ. ಪರಿಸರ ಸಮತೋಲನಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸೂಕ್ತ ಸಾರಿಗೆ ಹಾಗೂ ಸಂಪರ್ಕ ಸೌಲಭ್ಯ ಇಲ್ಲವಾದರೆ ಅನ್ಯ ರಾಜ್ಯಗಳಿಗೆ ಇದರ ಲಾಭ ಸಿಗಲಿದೆ. ಸರಕು ಸಾಗಣೆ ಅನ್ಯ ರಾಜ್ಯಗಳ ಮೂಲಕ ಆಗುತ್ತಿದ್ದು, ಅವರಿಗೆ ಸಿಗುವ ಅನುದಾನ ಹಾಗೂ ಅನುಕೂಲ ರೈಲು ಮಾರ್ಗಗಳ ನಿರ್ಮಾಣದಿಂದ ನಮಗೆ ಲಭಿಸಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯೋಜನೆ ಜಾರಿಗೆ ಸಿದ್ಧವಿದ್ದು, ಜನ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಓದಿ: 'ಚಿಕ್ಕ ಬಜೆಟ್ ಅತ್ಯಂತ ಪ್ರಭಾವಶಾಲಿಯಾಗಿದೆ'; ವಿತ್ತ ಸಚಿವೆ ಬಜೆಟ್ಗೆ ಆನಂದ್ ಮಹೀಂದ್ರಾ ಮೆಚ್ಚುಗೆ