ಬೆಂಗಳೂರು: ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿ ಆಸ್ತಿ ವಿವರದ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಸಮನ್ಸ್ ನೀಡಲು ಸಂಸದ ಪ್ರಜ್ವಲ್ ರೇವಣ್ಣ ಸಿಗದ ಹಿನ್ನೆಲೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್ 30 ರೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿದೆ.
ಆಸ್ತಿ ವಿವರದಲ್ಲಿ ತಪ್ಪು ಮಾಹಿತಿ ನೀಡಿ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ಇಂದು ನ್ಯಾಯಲಯದಲ್ಲಿ ನಡೆಯಿತು.
ಕಳೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರಜ್ವಲ್ ರೇವಣ್ಣ ಅವರಿಗೆ ಕೋರ್ಟ್ ಸಿಬ್ಬಂದಿ ಮೂಲಕ ಹೈಕೋರ್ಟ್ ಸಮನ್ಸ್ ಕಳುಹಿಸಿ ಕೊಟ್ಟರು. ಅದು ತಲುಪಿಲ್ಲ ಈ ಹಿನ್ನೆಲೆ ಸಮನ್ಸ್ ಜಾರಿಯಾಗಿರುವ ಕುರಿತು ಪತ್ರಿಕಾ ಪ್ರಕಟಣೆ ನೀಡಬೇಕೆಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.
ಅರ್ಜಿದಾರರು ವಾದ ನಡೆಸುತ್ತಿರುವ ವೇಳೆ ಹಾಸನ ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್ ಗೆ ವರದಿ ಸಲ್ಲಿಸಿ, ಕೋರ್ಟ್ ಸಿಬ್ಬಂದಿಯು 2 ಬಾರಿ ಸಮನ್ಸ್ ಪ್ರತಿ ತಲುಪಿಸಲು ಪ್ರಜ್ವಲ್ ರೇವಣ್ಣ ಸಲ್ಲಿಸಿದ ನಾಮಪತ್ರದಲ್ಲಿ ಉಲ್ಲೇಖಿಸಿದ್ದ ವಿಳಾಸಕ್ಕೆ ಹೋದಾಗ ಆ ವಿಳಾಸದಲ್ಲಿ ಪ್ರಜ್ವಲ್ ರೇವಣ್ಣ ಇರಲಿಲ್ಲ ಎಂದು ಮಾಹಿತಿ ನೀಡಿದರು. ಹೀಗಾಗಿ ಇಂದು ನ್ಯಾಯಾಲಯ ಅರ್ಜಿದಾರರ ಮನವಿಯಂತೆ ಪ್ರಜ್ವಲ್ ರೇವಣ್ಣ ಅವರು ಪೇಪರ್ ಪ್ರಕಟಣೆ ನೋಡಿ ಕೋರ್ಟ್ಗೆ ಹಾಜರಾಗಬೇಕೆಂದು ತಾಕೀತು ಮಾಡಿದೆ.
ಪ್ರಜ್ವಲ್ ರೇವಣ್ಣ ನಾವು ಹಾಕಿರುವ ಅರ್ಜಿ ವಿಚಾರಣೆಗೆ ಹಾಜರಾಗಿರಲಿಲ್ಲ. ಆದ ಕಾರಣ ನಾವು ಪತ್ರಿಕಾ ಪ್ರಕಟಣೆ ಕುರಿತು ಕೋರ್ಟ್ಗೆ ಮನವಿ ಮಾಡಿದ್ದೆವು. ಕೋರ್ಟ್ ಈಗ ಸೆ.30 ರೊಳಗೆ ನ್ಯಾಯಾಲಯದ ಎದುರು ಹಾಜರಾಗುವಂತೆ ಆದೇಶಿಸಿದೆ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು.