ಬೆಂಗಳೂರು: ರಾಷ್ತ್ರೀಯ ಜಾನುವಾರು ಮಿಷನ್ ಯೋಜನೆ ಅಡಿಯಲ್ಲಿ ಮಾರಕ ಕಾಲುಬಾಯಿ ರೋಗ ನಿಯಂತ್ರಿಸಲು ಶೀಘ್ರದಲ್ಲೇ ರಾಜ್ಯಕ್ಕೆ ಒಂದು ಕೋಟಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಪಶುಸಂಗೋಪನಾ ಸಚಿವ ಪರಷೋತ್ತಮ್ ರೂಪಾಲ ಅವರನ್ನು ಸಚಿವರು ಭೇಟಿ ಮಾಡಿದರು. ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣಕ್ಕೆ ಅನುದಾನ ಹಾಗೂ ಅಗತ್ಯ ಲಸಿಕೆಯನ್ನು ತುರ್ತಾಗಿ ನೀಡುವಂತೆ ಮನವಿ ಮಾಡಿದ್ದು, ಕೇಂದ್ರ ಸಚಿವರಿಂದ ಭರವಸೆ ದೊರೆತಿದೆ ಎಂದು ಚವ್ಹಾಣ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಜಾನುವಾರು ಯೋಜನೆಯಡಿ ಜಾನುವಾರುಗಳಿಗೆ ಮೇವು ಉತ್ಪಾದನೆಗಾಗಿ 51 ಕೋಟಿ ರೂ. ಅನುದಾನ ಮತ್ತು ಜಾನುವಾರುಗಳಿಗೆ ಮೂರನೇ ಸುತ್ತಿನ ಎಫ್.ಎಂ.ಡಿ ಲಸಿಕೆಯನ್ನು ನೀಡಬೇಕಾಗಿದೆ. ಹಾಗಾಗಿ ಒಂದು ಕೋಟಿ ಲಸಿಕೆಯನ್ನು ತುರ್ತಾಗಿ ನೀಡುವಂತೆ ಸಚಿವ ಚವ್ಹಾಣ್ ಕೇಂದ್ರ ಸಚಿವರಲ್ಲಿ ಕೋರಿದ್ದಾರೆ. ಜಾನುವಾರುಗಳಲ್ಲಿ ಹೆಚ್ಚಾಗಿ ಕಂಡುಬರುವ ಕಾಲು ಬಾಯಿ ರೋಗ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿರುವ ಪರಷೋತ್ತಮ್ ರೂಪಾಲ ಅವರು, ಜಾನುವಾರುಗಳಿಗೆ ವರ್ಷಕ್ಕೆ 2 ಬಾರಿ ಲಸಿಕೆಯನ್ನು ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಇದನ್ನೂ ಓದಿ: ಒಂದು ತಿಂಗಳೊಳಗಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ಪಾವತಿ : ಸಚಿವ ಆರ್ ಅಶೋಕ್
ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಂಡುಬಂದಾಗ ಹಾಗೂ ಆರೋಗ್ಯ ಸೇವೆ ತುರ್ತು ಸಂದರ್ಭಗಳಲ್ಲಿ ರೈತರು, ಪಶುಪಾಲಕರು ಆತಂಕಕ್ಕೊಳಗಾಗದೇ ಪಶುಸಂಗೋಪನೆ ಸಹಾಯವಾಣಿ ದೂರವಾಣಿ ಸಂಖ್ಯೆ 1962ಗೆ ಹಾಗೂ ಇಲಾಖಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ, ಯೋಜನೆಗಳ ಕುರಿತು ತಿಳಿಯಲು 8277 100200ಗೆ ಕರೆ ಮಾಡಿದರೆ ಕಾಲುಬಾಯಿ ರೋಗ ಲಸಿಕೆ ಲಭ್ಯತೆ ಹಾಗೂ ಸ್ಥಳೀಯ ಪಶು ಆಸ್ಪತ್ರೆಗಳ ಕುರಿತು ಸಹಾಯವಾಣಿ ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ. ನಮ್ಮ ಪಶು ವೈದ್ಯರು ಮತ್ತು ಸಿಬ್ಬಂದಿ ಕಾಲುಬಾಯಿ ರೊಗದ ಲಸಿಕೆ ನೀಡುವಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದರು.